ಬೆಂಗಳೂರು: 2022-23ನೇ ಸಾಲಿನಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಡಿ 29,165.81 ಕೋಟಿ ಅನುದಾನ ಒದಗಿಸಲಾಗಿದ್ದು, ಅನುದಾನವನ್ನು ಆದ್ಯತೆ ಮೇಲೆ ವಿನಿಯೋಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಎಸ್.ಸಿ.ಎಸ್.ಪಿ ಯಡಿ ರೂ.13,483.79 ಕೋಟಿ ಬಿಡುಗಡೆಯಾಗಿದ್ದು, ಅದರಲ್ಲಿ 10,783.47 ಕೋಟಿ ವೆಚ್ಚವಾಗಿರುತ್ತದೆ. 80 ಶೇ ಬಿಡುಗಡೆಯಾಗಿದ್ದು, 52ಶೇ ಹಂಚಿಕೆಯಾಗಿರುತ್ತದೆ. ಇದುವರೆಗೆ ಟಿ.ಎಸ್.ಪಿಯಡಿ ರೂ.5165.92 ಕೋಟಿ ಬಿಡುಗಡೆಯಾಗಿದ್ದು, 3,383.25 ಕೋಟಿ ವೆಚ್ಚವಾಗಿರುತ್ತದೆ. 65 ಶೇ ಬಿಡುಗಡೆಯಾಗಿ, 41ಶೇ ಹಂಚಿಕೆಯಾಗಿರುತ್ತದೆ. ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳೊಂದಿಗೆ ಡಿಸೆಂಬರ್ 1 ರಂದು ಸಭೆ ನಡೆಸಲಾಗಿದ್ದು, ಪ್ರಥಮ ಆದ್ಯತೆಯಲ್ಲಿ ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಅನುದಾನವನ್ನು ವಿನಿಯೋಗಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಗೆ 2022-23ನೇ ಸಾಲಿನಲ್ಲಿ ರೂ.4314.28 ಕೋಟಿ ಅನುದಾನ ಒದಗಿಸಿದ್ದು, ಬಿಡುಗಡೆಯಾಗಿರುವ ರೂ. 3085.96 ಕೋಟಿಗಳಲ್ಲಿ ರೂ. 2348.92 ಕೋಟಿ ವೆಚ್ಚ ಮಾಡಲಾಗಿದೆ. 76 ಶೇ ಬಿಡುಗಡೆಯಾಗಿದ್ದರೆ 54 ಹಂಚಿಕೆಯಾಗಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಅನುಕ್ರಮವಾಗಿ ಹಂಚಲಾಗಿದೆ ಎಂದು ಮಾಹಿತಿ ನೀಡಿದರು.
15% ರಿಂದ 17% ಹಾಗೂ 3% ನಿಂದ 7% ಕ್ಕೆ ಹೆಚ್ಚಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ.ಜಾತಿ, ಪ.ಪಂಗಡದ ನಿಗಮಗಳಿಗೆ ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಭೂ ಒಡೆತನ ಇತ್ಯಾದಿ ಕಾರ್ಯಕ್ರಮಗಳಿಗೆ 580.19 ಕೋಟಿ ಅನುದಾನ ಒದಗಿಸಿದೆ. ಹೆಚ್ಚುವರಿಯಾಗಿ ರೂ.420.00 ಕೋಟಿಗಳನ್ನು ಒದಗಿಸಿದ್ದು, ಒಟ್ಟು ರೂ.1000.19 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಮಾಸಿಕ ಭೋಜನ ವೆಚ್ಚವನ್ನು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ರೂ.1,600 ರಿಂದ ರೂ.1,750 ಕ್ಕೆ ಏರಿಕೆ ಮಾಡಲಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ರೂ.1,500 ರಿಂದ ರೂ.1,650 ಹೆಚ್ಚಿಸಲಾಗಿದೆ. ಎಸ್.ಸಿ, ಎಸ್.ಟಿ ನಿರುದ್ಯೋಗಿಗಳಿಗೆ ಇ-ಕಾಮರ್ಸ್ ಅಡಿ ಅನುಕೂಲ ಮಾಡಿಕೊಡಲಾಗಿದ್ದು, ಆಹಾರ ಮತ್ತು ಇತರೆ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ವಾಹನ ಸೌಲಭ್ಯ ಮಾಡಲಾಗಿದೆ ಎಂದರು.
ವಿದ್ಯುತ್ ಹಾಗೂ ಇತರ ದ್ವಿಚಕ್ರ ವಾಹನಗಳಿಗೆ ಗರಿಷ್ಟ ರೂ.50,000 ಸಹಾಯಧನ ಮತ್ತು ರೂ.20,000 ಸಾಲ ನೀಡಲಾಗುತ್ತಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 100 ರಂತೆ, ಒಟ್ಟು ಗುರಿ 22,400 ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. 300 ಎಸ್.ಸಿ, ಎಸ್.ಟಿ ಮಹಿಳೆಯರಿಗೆ ಪ್ರತಿಷ್ಠಿತ ಐ.ಐ.ಎಂ. ಬೆಂಗಳೂರಿನಲ್ಲಿ ಉದ್ಯಮಶೀಲತಾ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ 3 ಬ್ಯಾಚ್‌ಗಳ ತರಬೇತಿ ಪ್ರಗತಿಯಲ್ಲಿದೆ. 2022-23ನೇ ಸಾಲನಿಂದ ಪ.ಜಾತಿ, ಪ.ಪಂಗಡದ ಬಿ.ಪಿ.ಎಲ್ ಕುಟುಂಬಗಳಿಗೆ 75 ಯುನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಕರ್ನಾಟಕದಲ್ಲಿ ಭೇಟಿ ನೀಡಿರುವ 10 ಪ್ರಮುಖ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ವಸತಿ ಯೋಜನೆ ಫಲಾನುಭವಿಗಳಿಗೆ ಜ.15 ರೊಳಗೆ ಸಾಲ ಮಂಜೂರು ಮಾಡಿ: ಬ್ಯಾಂಕ್ಗಳಿಗೆ ಸಚಿವ ಸೋಮಣ್ಣ ಸೂಚನೆ