ಬೆಂಗಳೂರು: ''ಕರ್ನಾಟಕಕ್ಕೆ ಬಸವ ನಾಡು ಹೆಸರಿಡುವುದರಲ್ಲಿ ತಪ್ಪೇನಿಲ್ಲ'' ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿ ಇಂದು (ಶುಕ್ರವಾರ) ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ''ಹಲವರು ಬಸವ ಜಿಲ್ಲೆ ಆಗಲಿ ಎಂದು ಬೇಡಿಕೆ ಇಟ್ಟಿದ್ದಾರೆ. ಟೆಕ್ನಿಕಲ್ ಆಗಿ ಸ್ವಲ್ಪ ತೊಂದರೆ ಇದೆ. ಅದನ್ನು ಸಿಎಂ ಜೊತೆ ಚರ್ಚೆ ಮಾಡಬೇಕಿದೆ. ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಮಾಡುವ ಬೇಡಿಕೆ ಇದೆ. ಬೆಂಗಳೂರು ಮೆಟ್ರೋ, ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕು ಎಂಬುದಿದೆ'' ಎಂದು ತಿಳಿಸಿದರು.
''ಬಸವಣ್ಣನವರು ಜಾಗತಿಕವಾಗಿ ಅನುಭವ ಮಂಟಪ ಕೊಟ್ಟವರು. ಸಾಮಾಜಿಕ ಪರಿಕಲ್ಪನೆಯನ್ನು ಕೊಟ್ಟಂತವರು. ನಾವೇ ಎಷ್ಟೋ ಸಲ ಅಂತೇವೆ ನಮ್ಮ ನಾಡು ಬಸವ ನಾಡು ಆಗಬೇಕು ಅಂತ. ಬಸವ ಸಂಸ್ಕೃತಿ ಆಗಬೇಕು ಎಂಬ ಬೇಡಿಕೆಗಳಿವೆ" ಎಂದರು.
ಹೆಚ್ಡಿಕೆ ಆಣೆ ಪ್ರಮಾಣದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಗ್ರಾಮ ಪಂಚಾಯತಿ ಮಟ್ಟಕ್ಕೆ ರಾಜ್ಯ ರಾಜಕಾರಣ ಹೋಗಿದೆ. ಮೊದಲು ಕುಮಾರಸ್ವಾಮಿ ಹೋಗಿ ಆಣೆ ಮಾಡಲಿ. ಆಮೇಲೆ ಉಳಿದವರು ಮಾಡಲಿ'' ಎಂದು ಟಾಂಗ್ ನೀಡಿದರು.
ಮೈತ್ರಿ ಸರ್ಕಾರದಲ್ಲಿ ದುಡ್ಡು ಮುಟ್ಟಿಲ್ಲ ಎಂಬ ಅವರ ಹೇಳಿಕೆಗೆ, ''ಬೇರೆ ಅವಧಿಯಲ್ಲಿ ಹಣ ಪಡೆದಿರಬಹುದು'' ಎಂದು ಹೇಳಿದರು. ಆಪರೇಷನ್ ಕಮಲ ಬಗ್ಗೆ ಮಾತನಾಡಿ, ''ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಮನಕ್ಕೆ ತರಲಿ. ನಮ್ಮ ಪಕ್ಷ ಆ ಬಗ್ಗೆ ಹೋರಾಟ ಮಾಡಲಿದೆ. ಆಪರೇಷನ್ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅಧ್ಯಕ್ಷರಿಗೆ ಮಾಹಿತಿ ಇರಬಹುದು. ನಮ್ಮ ಪಕ್ಷದಿಂದ ಐದು ಶಾಸಕರನ್ನೂ ಸೆಳೆಯಲು ಸಾಧ್ಯವಿಲ್ಲ. ಅವರಿಗೆ ಸರ್ಕಾರ ತೆಗೆಯಲು 65 ಶಾಸಕರು ಬೇಕು. ಅದು ಹುಡುಕಾಟನಾ? ಉಲ್ಟಾ ಬಿಜೆಪಿ ಜೆಡಿಎಸ್ನಿಂದ ಶಾಸಕರು ನಮ್ಮ ಪಕ್ಷಕ್ಕೆ ಬರಲಿದ್ದಾರೆ. ಇವರು ಐದು ಹೊಡೆದರೆ 10 ಮಂದಿ ನಮ್ಮ ಕಡೆ ಬರಲಿದ್ದಾರೆ'' ಎಂದು ತಿರುಗೇಟು ಕೊಟ್ಟರು.
ಎರಡೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಎಂಬ ಶಾಸಕ ಗಣಿಗ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ''ನಮ್ಮಲ್ಲಿ ಯಾರು ಸಿಎಂ ಆಗಬೇಕೆಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಹೈಕಮಾಂಡ್ ಈಗಾಗಲೇ ಸ್ಪಷ್ಟೀಕರಣ ನೀಡಿದೆ. ಯಾವ ಶಾಸಕರು, ಸಚಿವರು ಸಿಎಂ, ಡಿಕೆಶಿ ಯಾರ ಕೈಯಲ್ಲಿಲ್ಲ, ಪಕ್ಷ ನಿರ್ಧಾರ ಮಾಡುತ್ತೆ ಅಂತ. ಗಣಿಗ ರವಿ ಹೇಳಿಕೆ ಅದು ಅವರ ವೈಯಕ್ತಿಕ'' ಎಂದರು.
''ಡಿಕೆಶಿಯವರೇ ಈ ಬಗ್ಗೆ ಯಾರೂ ಮಾತನಾಡಬೇಡಿ ಅಂತ ಹೇಳಿದ್ರು. ಅದಕ್ಕೂ ಮುಂಚೆ ಖರ್ಗೆ, ಸುರ್ಜೆವಾಲ ಕೂಡ ಯಾರೂ ಮಾತನಾಡಬೇಡಿ ಅಂತ ಹೇಳಿದ್ರು. ಆದರೂ ಪ್ರೀತಿಯಿಂದ ಕೆಲವರು ಮಾತನಾಡಿದ್ದಾರೆ. ಪಕ್ಷ ಅದನ್ನು ಗಮನಿಸುತ್ತೆ, ಅವರ ಜೊತೆ ಅಧ್ಯಕ್ಷರು, ಸಿಎಂ, ಜನರಲ್ ಸೆಕ್ರೆಟರಿ ಚರ್ಚೆ ಮಾಡ್ತಾರೆ'' ಎಂದು ತಿಳಿಸಿದರು.
ಇದನ್ನೂ ಓದಿ: 'ಕಾಂಗ್ರೆಸ್ ನಾಯಕರನ್ನು ಸೆಳೆದು ಕೋಟ್ಯಂತರ ರೂಪಾಯಿ ಆಮಿಷ': ಬಿಜೆಪಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು