ಬೆಂಗಳೂರು : ಮದುವೆಯಾಗುವ ಭರವಸೆ ನೀಡಿ ಬಳಿಕ ಅದನ್ನು ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಅಡಿಯಲ್ಲಿ ವಂಚನೆ ಅಪರಾಧವೆಂದು ಪರಿಗಣಿಸಲಾಗದು ಎಂದಿರುವ ಹೈಕೋರ್ಟ್, ಆರೋಪಿ ಯುವಕ ಹಾಗೂ ಆತನ ಕುಟುಂಬದ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಪಡಿಸಿ ಆದೇಶಿಸಿದೆ.
ತನ್ನ ಕುಟುಂಬ ಸದಸ್ಯರು ಹಾಗೂ ತನ್ನ ವಿರುದ್ಧ ಯುವತಿ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ಕೆ.ಆರ್ ಪುರದ ವೆಂಕಟೇಶ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಯುವತಿಗೆ ಮದುವೆಯಾಗುವ ಭರವಸೆ ನೀಡಿ ಬಳಿಕ ಅದನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಆದರೆ, ಮದುವೆಯಾಗುವ ಭರವಸೆ ನೀಡಿ ಬಳಿಕ ಅದನ್ನು ಉಲ್ಲಂಘಿಸಿದ್ದರೆ ವಂಚನೆ ಎನ್ನಲಾಗದು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 415ರಲ್ಲಿ ವಂಚನೆ ಕುರಿತು ನೀಡಿರುವ ವ್ಯಾಖ್ಯಾನದ ವ್ಯಾಪ್ತಿಗೆ ಮದುವೆ ಭರವಸೆ ಮುರಿಯುವುದನ್ನು ಸೇರಿಸಲಾಗದು. ಯುವತಿಗೆ ಮೋಸ ಮಾಡುವ ಉದ್ದೇಶದಿಂದಲೇ ಹೀಗೆ ಮಾಡಿದ್ದಾನೆ ಎಂಬುದನ್ನು ತೋರಿಸಿಲ್ಲ ಎಂದು ಅಭಿಪ್ರಾಯಪಟ್ಟು ಪೊಲೀಸರು ದಾಖಲಿಸಿದ್ದ ಎಫ್ಐಆರ್ ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ : 2020ರ ಮೇ 5ರಂದು ಬೆಂಗಳೂರಿನ ರಾಮಮೂರ್ತಿ ನಗರದ ಯುವತಿ ಕೆಆರ್‌ಪುರಂ ನಿವಾಸಿಗಳಾದ ವೆಂಕಟೇಶ್ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ, ತಾನು ಹಾಗೂ ವೆಂಕಟೇಶ್ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವ ಭರವಸೆ ನೀಡಿದ್ದ.
ಇದೀಗ ತನಗೆ ವಂಚಿಸಿ ಬೇರೊಂದು ಮದುವೆಯಾಗಿದ್ದಾನೆ. ಇದರಲ್ಲಿ ಆತನ ಕುಟುಂಬ ಸದಸ್ಯರ ಪಾತ್ರವೂ ಇದೆ. ಆದ್ದರಿಂದ ವೆಂಕಟೇಶ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದಿದ್ದರು. ಯುವತಿಯ ದೂರಿನ ಮೇರೆಗೆ ರಾಮಮೂರ್ತಿ ನಗರ ಠಾಣೆ ಪೊಲೀಸರು ವೆಂಕಟೇಶ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 506 ಹಾಗೂ 34ರ ಅಡಿ ಎಫ್ಐಆರ್ ದಾಖಲಿಸಿದ್ದರು. ಆ ಬಳಿಕ ವೆಂಕಟೇಶ್ ಹಾಗೂ ಆತನ ಕುಟುಂಬ ಸದಸ್ಯರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ