ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅದ್ಯಾವಾಗ ಹಸೆಮಣೆ ಏರುತ್ತಾರೆ ಎಂಬುದು ಅಭಿಮಾನಿಗಳ ಬಹು ಸಮಯದ ಪ್ರಶ್ನೆಯಾಗಿತ್ತು. ಇತ್ತೀಚೆಗಷ್ಟೇ ಅದಕ್ಕೆ ಉತ್ತರ ಸಿಕ್ಕಿದೆ. ಹೊಸ ವರ್ಷದ ಆರಂಭದಲ್ಲಿ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ದಾಂಪತ್ಯ ಜೀವನ ಆರಂಭಿಸಲಿದ್ದು, ಸದ್ಯ ಮದುವೆ ಸಿದ್ಧತೆಗಳು ಜೋರಾಗೇ ನಡೆಯುತ್ತಿವೆ. ಇದೀಗ ಪ್ರಮುಖ ರಾಜಕೀಯ ಮುಖಂಡರನ್ನು ಡಾಲಿ ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.
ದೇವೇಗೌಡರ ಆಶೀರ್ವಾದ ಪಡೆದುಕೊಂಡ ಭಾವಿ ದಂಪತಿ: ಹೌದು, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮದುವೆ ಆಮಂತ್ರಣ ಪತ್ರ ನೀಡಿದ್ದಾರೆ. ಡಾಲಿ ಧನಂಜಯ್ ಜೊತೆ ಭಾವಿ ಪತ್ನಿ ಧನ್ಯತಾ ಉಪಸ್ಥಿತರಿದ್ದರು. ಇಬ್ಬರೂ ದೇವೇಗೌಡ್ರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಈ ಜೋಡಿಯದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಕೆಲ ವಾರಗಳ ಹಿಂದೆಷ್ಟೇ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಕ್ಕೂ ಮುನ್ನ ಡಾಲಿ ಬಹಳ ವಿಭಿನ್ನ ವಿಡಿಯೋ ಶೂಟ್ ಮೂಲಕ ತಮ್ಮ ಭಾವಿ ಪತ್ನಿಯನ್ನು ಪರಿಚಯಿಸಿದ್ದರು. ಫೆಬ್ರವರಿ 16ರಂದು ಹಸೆಮಣೆ ಏರಲಿರುವ ಪ್ರೇಮಪಕ್ಷಿಗಳು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನೀಡಿ ಗಮನ ಸೆಳೆದಿದ್ದರು. ನಂತರ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದರು. ಇದೀಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸಕ್ಕೆ ತೆರಳಿ ಮದುವೆ ಆಮಂತ್ರಣ ಪತ್ರ ನೀಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು: ಡಿಸೆಂಬರ್ 15ರಂದು ಮದುವೆ ಆಮಂತ್ರಣ ಪತ್ರಿಕೆ ಸ್ವೀಕರಿಸಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ''ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ತಮ್ಮ ಮದುವೆಯ ಕರೆಯೋಲೆ ನೀಡಿ, ಆಹ್ವಾನಿಸಿದರು. ಹೊಸ ಬದುಕಿಗೆ ಮುಂದಡಿ ಇಡುತ್ತಿರುವ ಜೋಡಿಗೆ ಶುಭ ಹಾರೈಸಿದೆ'' ಎಂದು ಎಕ್ಸ್ ಪೋಸ್ಟ್ ಶೇರ್ ಮಾಡಿದ್ದರು.
ಇದನ್ನೂ ಓದಿ: ಮೃತ ಅಭಿಮಾನಿಯ ಕುಟುಂಬಕ್ಕೆ ₹2 ಕೋಟಿ ನೆರವು ಘೋಷಿಸಿದ ಅಲ್ಲು ಅರ್ಜುನ್, ಪುಷ್ಪ 2 ತಂಡ
ಕೈಬರಹದದಲ್ಲಿ ರೆಡಿಯಾಯ್ತು ಆಮಂತ್ರಣ ಪತ್ರ: ಪ್ರೀತಿಯ ಬಂಧು ಮಿತ್ರರೇ, ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು, ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು, ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ. ತಾವು ಎಲ್ಲಿದ್ದರೂ, ಜಗದ ಯಾವ ಮೂಲೆಯಲ್ಲಿದ್ದರೂ, ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ, ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ ಹಾಗೂ ಧನ್ಯತಾ ಎಂದು ಆಮಂತ್ರಣ ಪತ್ರದಲ್ಲಿ ಬರೆಯಲಾಗಿದೆ. ಬರಹ ಕೈಬರಹದ ಫಾಂಟ್ನಲ್ಲಿದ್ದು, ಹೆಚ್ಚಿನವರ ಗಮನ ಸೆಳೆದಿದೆ.
ಇದನ್ನೂ ಓದಿ: ಮ್ಯಾಕ್ಸ್ ಭರ್ಜರಿ ಕಲೆಕ್ಷನ್: ಅದ್ಭುತ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸುದೀಪ್ ಸಿನಿಮಾ
ಮದುವೆ 2025ರ ಫೆಬ್ರವರಿ 16ರಂದು ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ. ಶನಿವಾರ (ಫೆ.15) ಆರತಕ್ಷತೆ ನಡೆದರೆ, ಭಾನುವಾರ ವಿವಾಹ ಅದ್ಧೂರಿಯಾಗಿ ಜರುಗಲಿದೆ. ಸಮಾರಂಭಕ್ಕೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಬಂದು ಸೇರುವ ನಿರೀಕ್ಷೆಯಿದೆ.