ಬೆಂಗಳೂರು: ಕೊರೊನಾ ಹಿನ್ನೆಲೆ ವಿಧಿಸಲಾಗಿದ್ದ ಲಾಕ್ಡೌನ್ ದೇಶದ ಆರ್ಥಿಕತೆಗೆ ಶಾಪವಾದರೆ ಪರಿಸರಕ್ಕೆ ವರವಾಗಿ ಪರಿಣಮಿಸಿದೆ. ಲಾಕ್ಡೌನ್ ಮುನ್ನ ಉಂಟಾಗುತ್ತಿದ್ದ ಕಿವಿಗಡಚಿಕ್ಕುವ ಶಬ್ದ ಮಾಲಿನ್ಯ ಲಾಕ್ಡೌನ್ ಅವಧಿಯಲ್ಲಿ ತೀರಾ ಕಡಿಮೆಯಾಗಿದೆ.
ಇದೀಗ ಅನ್ಲಾಕ್ ಜಾರಿ ಬಳಿಕ ಮತ್ತೆ ನಗರದ ಕೆಲವು ಏರಿಯಾಗಳಲ್ಲಿ ಶಬ್ದ ಮಾಲಿನ್ಯ ಹೆಚ್ಚಳವಾದರೆ ಇನ್ನು ಕೆಲವೆಡೆ ನಗರದಲ್ಲಿ ಶಬ್ದ ಮಾಲಿನ್ಯ ಕಡಿಮೆಯಾಗಿರುವುದು ಕಂಡು ಬಂದಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಲಾಕ್ಡೌನ್ ಅವಧಿ ಹಾಗೂ ಅನ್ಲಾಕ್ ಜಾರಿ ದಿನಗಳಲ್ಲಿ ನಗರದಲ್ಲಿ ಉಂಟಾಗುತ್ತಿರುವ ಶಬ್ದ ಮಾಲಿನ್ಯ ಪ್ರಮಾಣದ ಬಗ್ಗೆ ಕೆಎಸ್ಪಿಸಿಬಿ ನಗರದಲ್ಲಿ ಅಳವಡಿಸಿರುವ 10 ಶಬ್ದ ಮಾಪನ ಕೇಂದ್ರಗಳಲ್ಲಿ ಅಧ್ಯಯನ ನಡೆಸಿದೆ.
ನಗರದ ಕೈಗಾರಿಕಾ ಪ್ರದೇಶ, ವಸತಿ ಪ್ರದೇಶ ಹಾಗೂ ಸೂಕ್ಷ್ಮಪ್ರದೇಶಗಳು ಒಳಗೊಂಡಂತೆ ನಡೆಸಿದ ಅಧ್ಯಯನದಲ್ಲಿ ಅನ್ಲಾಕ್ ಅವಧಿಯಲ್ಲಿ ಕೆಲವು ಕಡೆ ಶಬ್ದ ಮಾಲಿನ್ಯ ಹೆಚ್ಚಾದರೆ ಇನ್ನೂ ಕೆಲವು ಕಡೆ ಮಾಲಿನ್ಯ ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ವೈಟ್ಫೀಲ್ಡ್ ಕೈಗಾರಿಕಾ ಪ್ರದೇಶದಲ್ಲಿ ಲಾಕ್ಡೌನ್ ವೇಳೆ 59.3 ಡೆಸಿಬಲ್ ದಾಖಲಾಗಿದ್ದರೆ, ಸಡಿಲಿಕೆ ಬಳಿಕ 64.1 (8.1) ಏರಿಕೆಯಾಗಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 57.1ರಷ್ಟಿದ್ದ ಮಾಲಿನ್ಯ ಇದೀಗ 63.3ಕ್ಕೆ ಏರಿದೆ. ಚರ್ಚ್ ಸ್ಟ್ರೀಟ್ ರಸ್ತೆ 58.3 ಜಾಗದಲ್ಲಿ 63.2 ಬಂದಿದೆ. ಯಶವಂತಪುರ 65ರಷ್ಟಿದ್ದ ಶಬ್ದ ಮಾಲಿನ್ಯ 69.2 ಹೆಚ್ಚಳವಾಗಿದೆ. ಲಾಕ್ಡೌನ್ ವೇಳೆ ದೊಮ್ಮಲೂರಿನಲ್ಲಿ 59.1ರಷ್ಟಿದ್ದ ಜಾಗದಲ್ಲಿ 63.9, ಮೈಸೂರು ರೋಡ್ 51.9 ರಷ್ಟಿದ್ದ ಶಬ್ದದ ಡೆಸಿಬಲ್ 55.5ಕ್ಕೆ ಬಂದು ನಿಂತಿದೆ.
ಅದೇ ರೀತಿ ನಿಮಾನ್ಸ್ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಮಾರತ್ ಹಳ್ಳಿ, ಎಸ್.ಜಿ. ಹಳ್ಳಿ ಹಾಗೂ ಮಾರತ್ ಹಳ್ಳಿಯಲ್ಲಿ ಶಬ್ದ ಮಾಲಿನ್ಯ ಕಡಿಮೆಯಾಗಿದೆ. ಲಾಕ್ಡೌನ್ ಸಡಿಲಿಕೆ ಬಳಿಕ ವಾಹನ ಸಂಚಾರ ಹೆಚ್ಚಾಗಿದ್ದು ಲಾರಿ, ಬಸ್ ಸೇರಿದಂತೆ ಮತ್ತಿತರ ವಾಹನಗಳು ಹೆಚ್ಚಾಗಿದ್ದರಿಂದ ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಾಗಿದೆ. ದೋಷಪೂರಿತ ಸೈಲೆನ್ಸರ್ನಿಂದ ಮಾಲಿನ್ಯ ಸಿಲಿಕಾನ್ ಸಿಟಿ, ಐಟಿಬಿಟಿ ಎಂದು ನಾಮಾಂಕಿತ ಪಡೆದಿರುವ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಶಬ್ಧ ಮಾಲಿನ್ಯ ಊಹೆಗೂ ನಿಲುಕದ ಮಟ್ಟಕ್ಕೆ ಹೋಗಿದೆ. ಸದಾ ವಾಹನ ದಟ್ಟಣೆ ಯಿಂದ ಕೂಡಿರುವ ನಗರ ಪ್ರದೇಶಗಳ ಟ್ರಾಫಿಕ್ ಜಂಕ್ಷನ್ಗಳಲ್ಲಿ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಹೆಚ್ಚಾಗುವುದನ್ನು ಗಮನಿಸಿದ್ದೇವೆ. ಬೈಕ್ಗಳಲ್ಲಿ ಅವೈಜ್ಞಾನಿಕವಾಗಿ ಸೈಲೆನ್ಸರ್ ಅಳವಡಿಕೆಯಿಂದ ಕರ್ಕಶ ಶಬ್ದ ಉಂಟಾಗಲಿದೆ ಎಂದು ಅರಿತಿದ್ದರೂ ವಾಹನ ಸವಾರರು ತಲೆಕೆಡಿಸಿಕೊಳ್ಳದ ಪರಿಣಾಮ ಶಬ್ದ ಮಾಲಿನ್ಯ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ.
ಈ ಸಂಬಂಧ ಈ ವರ್ಷದ ಮೇ ಅಂತ್ಯಕ್ಕೆ ದೋಷಪುರಿತ ಸೈಲೆನ್ಸರ್ ಅಳವಡಿಸಿಕೊಂಡು ಚಾಲನೆ ಮಾಡುತ್ತಿದ್ದರ ಮೇಲೆ ನಗರ ಸಂಚಾರ ಪೊಲೀಸರು 685 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 2018 ಹಾಗೂ 2019ರಲ್ಲಿ ಅನುಕ್ರಮವಾಗಿ 9,519 ಹಾಗೂ 5,338 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಸಿಲ್ಕ್ ಬೋರ್ಡ್, ಹಳೆಮದ್ರಾಸ್ ರೋಡ್, ಏರ್ಪೋರ್ಟ್ ರೋಡ್, ಮೈಸೂರು ರಸ್ತೆ ಹಾಗೂ ತುಮಕೂರು ರೋಡ್ ಹಾಗೂ ಅರಮನೆ ರಸ್ತೆಗಳಲ್ಲಿರುವ ಸಿಗ್ನಲ್ಗಳಲ್ಲಿ ವಾಹನ ಸಂಚಾರ ಹೆಚ್ಚಳವಾಗಿ ಮಾಲಿನ್ಯಕ್ಕೆ ಕಾರಣವಾದರೆ ಇನ್ನೊಂದು ಕಡೆ ಸವಾರರು ಕಿರಿಕಿರಿ ಮಾಡುವ ಹಾರ್ನ್ಗಳು ಶಬ್ದ ಮಾಲಿನ್ಯ ಅಧಿಕವಾಗುವುದಕ್ಕೆ ಎಡೆಮಾಡಿಕೊಡುತ್ತಿವೆ.
ಜನರು ವಾಸಿಸುವ ಪ್ರದೇಶಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಕಿವಿಗಡಚಿಕ್ಕುವ ಹಾಗೇ ಧ್ವನಿವರ್ಧಕ ಹಾಕುವಂತಿಲ್ಲ ಹಾಗೂ ವಾಹನಗಳು ಹಾರ್ನ್ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ಜನರು ಕ್ಯಾರೆ ಎನ್ನುತ್ತಿಲ್ಲ. ಮಿತಿ ಮೀರಿದ ಶಬ್ದ ಮಾಲಿನ್ಯದಿಂದ ಮನುಷ್ಯನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮನುಷ್ಯರಲ್ಲಿ ಶಬ್ದದಿಂದ ಕಿವುಡತನ, ವಿಪರೀತ ತಲೆ ನೋವು ಹಾಗೂ ನರ ಸಂಬಂಧಿತ ಆರೋಗ್ಯ ಸಮಸ್ಯೆಗಳು ಕಾಡಲಿವೆ.