ಬೆಂಗಳೂರು: ಹೊಸಕೋಟೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ಅವರಂತಹ ಪ್ರಾಮಾಣಿಕ ವ್ಯಕ್ತಿ ಮತ್ತೊಬ್ಬರು ಸಿಗಲ್ಲ. ಎಂಟಿಬಿ ವಿರುದ್ಧ ಕಾಂಗ್ರೆಸ್ನವರು ಏನೇನೋ ಆರೋಪ ಮಾಡ್ತಿದಾರೆ. ಆದರೆ ಎಂಟಿಬಿ ಹೊಸಕೋಟೆಯಲ್ಲಿ ಗೆಲ್ಲೋದು ನಿಶ್ಚಿತ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ, ಎಂಟಿಬಿ ನಾಗರಾಜ್ 17 ಅನರ್ಹ ಶಾಸಕರ ರಾಜೀನಾಮೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸದ್ಯ ಹೊಸಕೋಟೆಯಲ್ಲಿ ಎಂಟಿಬಿ ನಾಗಾರಾಜ್ ವಿರುದ್ಧ ಶರತ್ ಬಚ್ಚೇಗೌಡ ಸ್ಪರ್ಧೆ ಮಾಡ್ತಿದ್ದಾರೆ. ಯಾವ ಕಾರಣಕ್ಕೂ ಶರತ್ ಬಚ್ಚೇಗೌಡ ಗೆಲ್ಲೋದಕ್ಕೆ ಸಾಧ್ಯವಿಲ್ಲ. ಹೊಸಕೋಟೆಯಲ್ಲಿ ನೂರಕ್ಕೆ ನೂರು ಪಾಲು ಶರತ್ ಸೋಲ್ತಾನೆ. ಹಾಗೆಯೇ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡ್ತೇವೆ. ಶರತ್ ಬಚ್ಚೇಗೌಡ ಅವರಿಗೆ ಕೊಟ್ಟಿರುವ ಹೌಸಿಂಗ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಅವರು ಇವತ್ತು ಸಂಜೆಯೊಳಗೆ ರಾಜೀನಾಮೆ ಕೊಡಬೇಕು ಎಂದರು.
ಹಾಗೆಯೇ ನಾಳೆ ಹೊಸಕೋಟೆ ಕ್ಷೇತ್ರದಲ್ಲಿ ದೊಡ್ಡ ಸಮಾವೇಶ ಮಾಡಲಾಗುವುದು. ಆ ಸಮಾವೇಶದಲ್ಲಿ ನಾನು ಭಾಗವಹಿಸುವೆ. 15 ಕ್ಷೇತ್ರದ ಅನರ್ಹ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತೇವೆ. ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸ ಇದೆ. ಆದ್ರೆ ಕೆಲವರು ಚುನಾವಣೆಗೆ ನಿಂತವರನ್ನ ಸೋಲಿಸುತ್ತೇವೆಂದು ಮಾತಾಡ್ತಾರೆ. ಇದರ ಬಗ್ಗೆ ನಾನೇನೂ ಮಾತಾಡಲ್ಲ. ಜನರೇ ಅದಕ್ಕೆ ಉತ್ತರ ಕೊಡ್ತಾರೆ ಎಂದರು.
ಇನ್ನು ನಿನ್ನೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ಕೊಟ್ಟಿರುವುದರ ಕುರಿತು ಮಾತನಾಡಿ, ಕಾಂಗ್ರೆಸ್ ದೂರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಿದ್ದರಾಮಯ್ಯ ಆ್ಯಂಡ್ ಟೀಂಗೆ ಕೆಲಸ ಇಲ್ಲ ಎಂದು ಹೇಳಿದರು.