ಬೆಂಗಳೂರು: ನಗರದ ಕ್ವಾರಂಟೈನ್ ಕೇಂದ್ರದಲ್ಲಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಮಹಿಳೆಗೆ ಪಿಟ್ಸ್ ಬಂದಿದ್ದರೂ ಕ್ವಾರಂಟೈನ್ ಕೇಂದ್ರದ ಸಿಬ್ಬಂದಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜ್ಞಾನ ಭಾರತಿ ಕ್ಯಾಂಪಸ್ನಲ್ಲಿ ಹೊರ ರಾಜ್ಯದಿಂದ ಬಂದವರನ್ನ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಕಳೆದ ರಾತ್ರಿ ಸುಮಾರು 9 ಗಂಟೆಗೆ ಮಹಿಳೆಯೊಬ್ಬರಿಗೆ ಪಿಟ್ಸ್ ಬಂದಿತ್ತು. ತಕ್ಷಣ ಇತರ ಕ್ವಾರಂಟೈನ್ನಲ್ಲಿರುವವರು ಕೇಂದ್ರದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ, ವೈದ್ಯಕೀಯ ಸೌಲಭ್ಯ ನೀಡದೇ ಕ್ವಾರಂಟೈನ್ ನೋಡಿಕೊಳ್ಳುವ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ, ಕ್ವಾರಂಟೈನ್ನಲ್ಲಿರುವ ಇತರರು ತಕ್ಷಣ ಸ್ಥಳೀಯ ಜ್ಞಾನಭಾರತಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಈ ವೇಳೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಮಹಿಳೆಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ.
ರಾತ್ರಿ 12 ಗಂಟೆಯವರೆಗೆ ಕ್ವಾರಂಟೈನ್ನಲ್ಲಿದ್ದವರು ಹೊರೆಗೆ ಬಂದು ಗಲಾಟೆ ಮಾಡಿ ಇಲ್ಲಿ ವ್ಯವಸ್ಥೆಗಳು ಸರಿ ಇಲ್ಲ. ನಾವು ಕ್ವಾರಂಟೈನ್ನಲ್ಲಿ ಇರುವುದಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಸದ್ಯ ಜ್ಞಾನ ಭಾರತಿ ಪೊಲಿಸರು ಸಮಾಧಾನಪಡಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.