ಬೆಂಗಳೂರು: ಆರ್ಆರ್ ನಗರ ಉಪಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮೂರು ಅಭ್ಯರ್ಥಿಗಳಲ್ಲಿ ಯಾರು ವಿಜಯದ ಪತಾಕೆ ಹಾರಿಸುತ್ತಾರೆ ಅನ್ನೋ ಕುತೂಹಲ ಎದ್ದಿದೆ. ಮುಂಜಾನೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 28 ಟೇಬಲ್ನಲ್ಲಿ 25 ಸುತ್ತು ಮತ ಎಣಿಕೆಯಾಗಲಿದೆ.
ಈ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಮುಂಜಾಗ್ರತೆಯಾಗಿ ಖಾಕಿ ಎಲ್ಲೆಡೆ ಅಲರ್ಟ್ ಆಗಿದೆ. ಅಭ್ಯರ್ಥಿಗಳ ಗೆಲುವು, ಸೋಲು ವಿಚಾರ ಸಂಬಂಧ ಪ್ರತಿಭಟನೆ ಅಥವಾ ಗಲಾಟೆ ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೆರವಣಿಗೆ ಅಥವಾ ಪ್ರತಿಭಟನೆ ಮಾಡುವಂತಿಲ್ಲ. ಮುಂಜಾನೆಯಿಂದ ಮಧ್ಯರಾತ್ರಿ ವರೆಗೆ ಕಲಂ 144 ಸೆಕ್ಷನ್ ಜಾರಿಯಲ್ಲಿದ್ದು, 5ಕ್ಕಿಂತ ಹೆಚ್ಚು ಜನ ಸೇರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಕುಮಾರ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಮತ ಎಣಿಕೆ ಸುತ್ತ ನಾಲ್ಕು ಹಂತದ ಭದ್ರತೆ ಇದೆ. ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಲು ಖಾಕಿ ಸರ್ಪಗಾವಲು ಇದ್ದು, ಎಣಿಕೆ ಕೇಂದ್ರದ ಎರಡು ಕಡೆಯ 100 ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಒಟ್ಟು 1,670 ಸಿಬ್ಬಂದಿ ನಿಯೋಜಿಸಲಾಗಿದೆ.