ಬೆಂಗಳೂರು: ರಾಜ್ಯದಲ್ಲಿ ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಬರಬೇಕೆಂದು ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ಆಗುವ ವಿದ್ಯಮಾನವೊಂದು ನಡೆದಿದೆ. ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದ ವೇಳೆ, ಕೆಲವು ವಿಧಾನಸಭೆ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಯೂ ಅರ್ಜಿ ಸಲ್ಲಿಸದಿರುವುದು ಪಕ್ಷಕ್ಕೆ ಅಚ್ಚರಿ ಮೂಡಿಸಿದೆ.
ಈ ಟಿವಿ ಭಾರತಕ್ಕೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಖಂಡರು ಪಕ್ಷದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿಲ್ಲ ಎನ್ನಲಾಗಿದೆ. ಹಾಸನ ಜಿಲ್ಲೆ ಜೆಡಿಎಸ್ನ ಭದ್ರಕೋಟೆ. ಹೆಚ್ ಡಿ ರೇವಣ್ಣ ಪ್ರತಿನಿಧಿಸುತ್ತಿದ್ದ ಹೊಳೆ ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಯಾವ ಕಾಂಗ್ರೆಸ್ ಮುಖಂಡರೂ ಆಸಕ್ತಿ ವ್ಯಕ್ತಪಡಿಸಿಲ್ಲ.
ಜೆಡಿಎಸ್ನ ಭದ್ರಕೋಟೆ: ಹೆಚ್ ಡಿ ಕುಮಾರಸ್ವಾಮಿ ಶಾಸಕರಾಗಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಿಂದಲೂ ಯಾವ ಕಾಂಗ್ರೆಸ್ ಮುಖಂಡರೂ ಅರ್ಜಿ ಸಲ್ಲಿಸಿಲ್ಲ ಎಂದು ಗೊತ್ತಾಗಿದೆ. ಈ ಎರಡೂ ಕ್ಷೇತ್ರಗಳು ಜೆಡಿಎಸ್ ಭದ್ರಕೋಟೆಯಾಗಿರುವುದರಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಹೆಚ್ಚಿನ ಆಸಕ್ತಿ ತೋರಿಲ್ಲ ಎನ್ನಲಾಗಿದೆ.
ಪಕ್ಷದ ಟಿಕೆಟ್ಗಾಗಿ ಅರ್ಜಿ ಜೊತೆ 2 ಲಕ್ಷ ರೂಪಾಯಿ ಡಿಡಿ ಸಲ್ಲಿಕೆ ಮಾಡಬೇಕಿರುವ ಪಕ್ಷದ ನಿಯಮಗಳಿಗೆ ಹಿಂದೇಟು ಹಾಕಿ ಸೋಲುವ ಕ್ಷೇತ್ರದಲ್ಲಿ ಅರ್ಜಿ ಸಲ್ಲಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಟಿಕೆಟ್ಗೆ ಅರ್ಜಿ ಸಲ್ಲಿಸಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಹೊಳೆನರಸೀಪುರದಲ್ಲಿ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಹಿಂದೆ ಸ್ಪರ್ಧೆ ಮಾಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮಂಜೇಗೌಡ ಅವರು ಈ ಬಾರಿ ಹೊಳೆ ನರಸೀಪುರ ಕ್ಷೇತ್ರದ ಬದಲು ತಮಗೆ ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಹೆಚ್ ಎಂ ರೇವಣ್ಣ ನಿರಾಸಕ್ತಿ: ಮಾಜಿ ಸಿಎಂ ಕುಮಾರಸ್ವಾಮಿ ಶಾಸಕರಾಗಿರುವ ಮತ್ತು ಬಿಜೆಪಿಯಿಂದ ಮುಖಂಡ ಸಿ ಪಿ ಯೋಗೇಶ್ವರ್ ಪ್ರತಿನಿಧಿಸುತ್ತಿರುವ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿ ಗೆಲ್ಲುವುದು ಕಷ್ಟವೆಂದು ಯಾವ ಕಾಂಗ್ರೆಸ್ ಅಭ್ಯರ್ಥಿ ಅರ್ಜಿ ಸಲ್ಲಿಸಲು ಆಸಕ್ತಿ ತೋರಿಲ್ಲವೆಂದು ಹೇಳಲಾಗಿದೆ. ಮಾಜಿ ಸಚಿವ ಹೆಚ್ ಎಂ ರೇವಣ್ಣ ಅವರು ಚನ್ನಪಟ್ಟಣ ಕ್ಷೇತ್ರದಲ್ಲಿ ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಈ ಬಾರಿ ಅಲ್ಲಿಂದ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಹೆಚ್ ಎಂ ರೇವಣ್ಣ ನಿರಾಸಕ್ತಿ ತೋರಿದ್ದಾರೆ.
ಕಾಂಗ್ರೆಸ್ ಪಕ್ಷ ದುರ್ಬಲವಾಗಿರುವ ಮತ್ತು ಆ ಕ್ಷೇತ್ರಗಳಲ್ಲಿ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಸೋಲಿಸುವುದು ಕಷ್ಟವೆಂದು ಮನವರಿಕೆಯಾದ ಕ್ಷೇತ್ರಗಳಲ್ಲಿ ಅರ್ಜಿ ಸಲ್ಲಿಸಲು ಯಾರೂ ಮುಂದೆ ಬಂದಿಲ್ಲ. 2ಲಕ್ಷ ರೂ. ಟಿಕೆಟ್ ಶುಲ್ಕ ಇಲ್ಲದೇ ಇರುತ್ತಿದ್ದರೆ ಈ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ನ ಯಾರಾದರೂ ಕಾರ್ಯಕರ್ತರು ಟಿಕೆಟ್ಗೆ ಅರ್ಜಿ ಸಲ್ಲಿಸುತ್ತಿದ್ದರು ಎನ್ನಲಾಗಿದೆ.
ಕಾಂಗ್ರೆಸ್ನಿಂದ ಮನವೊಲಿಸುವ ಪ್ರಯತ್ನ: ಹೊಳೆನರಸೀಪುರ, ಚನ್ನಪಟ್ಟಣ ಸೇರಿದಂತೆ ಟಿಕೆಟ್ಗೆ ಅರ್ಜಿ ಸಲ್ಲಿಕೆಯಾಗದ ಕ್ಷೇತ್ರಗಳಲ್ಲಿ ಕೆಲವು ಮುಖಂಡರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಕೆ ಮಾಡುವಂತೆ ಮನವೊಲಿಸುವ ಪ್ರಯತ್ನವನ್ನು ಕೆಪಿಸಿಸಿ ನಡೆಸಿದೆ ಎಂದೂ ತಿಳಿದುಬಂದಿದೆ. ವಿಧಾನಸಭೆ ಚುನಾವಣೆ ಟಿಕೆಟ್ಗೆ ಕಾಂಗ್ರೆಸ್ ಪಕ್ಷಕ್ಕೆ 1400 ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಅರ್ಜಿ ಜೊತೆ ಪ್ರತಿ ಟಿಕೆಟ್ ಆಕಾಂಕ್ಷಿಗಳು ಸಲ್ಲಿಸಿದ 2 ಲಕ್ಷ ರೂಪಾಯಿ ಮತ್ತು ಎಸ್ಸಿ, ಎಸ್ಟಿ ಜನಾಂಗದವರ 1 ಲಕ್ಷ ರೂಪಾಯಿ ಡಿಡಿಯಿಂದ ಸುಮಾರು 25 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.
ಆವುಗಳ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿನಿಧಿಸುವ ಕನಕಪುರ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಪ್ರತಿನಿಧಿಸುವ ಬೆಂಗಳೂರಿನ ಬಿಟಿಎಂ ಲೇಔಟ್, ಮಾಜಿ ಸಚಿವ ಕೆ ಜೆ ಜಾರ್ಜ್ ಪ್ರತಿನಿಧಿಸುವ ಸರ್ವಜ್ಞ ನಗರ ಕ್ಷೇತ್ರಗಳಲ್ಲಿ ಇವರನ್ನು ಹೊರತುಪಡಿಸಿ ಬೇರೆ ಯಾವ ಕಾಂಗ್ರೆಸ್ ಮುಖಂಡರೂ ಅರ್ಜಿ ಸಲ್ಲಿಸಿಲ್ಲವೆಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿಶ್ರಾಂತಿ, ಡಿಕೆಶಿ ಪ್ರವಾಸ: ಕೈ ಟಿಕೆಟ್ ಆಕಾಂಕ್ಷಿಗಳಿಗೆ ಇಕ್ಕಟ್ಟು