ಬೆಂಗಳೂರು: ಶಾಸಕರು, ಸಂಸದರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಅವರ ಖಾಸಗಿ ವಾಹನಗಳ ಮೇಲೆ ತಮ್ಮ ಹುದ್ದೆ, ಸರ್ಕಾರಿ ಲಾಂಛನ, ಚಿಹ್ನೆ ಒಳಗೊಂಡ ನಾಮಫಲಕ ಅಳವಡಿಸದಂತೆ ಕ್ರಮ ಜರುಗಿಸಬೇಕೆಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ನ್ಯಾ. ಆರ್.ದೇವದಾಸ್ ಅವರ ಪೀಠ ಈ ಸೂಚನೆ ನೀಡಿದ್ದು, ಜನಪ್ರತಿನಿಧಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ಹೆಸರು, ಹುದ್ದೆ, ಸರ್ಕಾರಿ ಲಾಂಛನ, ಚಿಹ್ನೆ ಅಳವಡಿಸಿಕೊಂಡಿರುವುದು ರಸ್ತೆಯಲ್ಲಿ ಕಾಣಸಿಗುತ್ತಿವೆ. ಅಲ್ಲದೆ, ಅಧಿಕಾರಿಗಳು ಸರ್ಕಾರ ನೀಡಿದ ಅಧಿಕೃತ ವಾಹನಗಳಲ್ಲದೇ, ತಮ್ಮ ಖಾಸಗಿ ವಾಹನಗಳ ಮೇಲೆ ಹುದ್ದೆ ಹಾಗೂ ಸರ್ಕಾರಿ ಚಿಹ್ನೆಯ ನಾಮಫಲಕ ಹಾಕಿಕೊಂಡಿದ್ದಾರೆ. ಈ ಕುರಿತು ಎಚ್ಚರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ವ್ಯಾಪಕ ಪ್ರಕಟಣೆ ನೀಡಬೇಕು. ಅಲ್ಲದೆ, ಈ ಬಗ್ಗೆ ದೂರುಗಳನ್ನು ಸಲ್ಲಿಸಲು ಸಾರ್ವಜನಿಕರಿಗೆ ವಾಟ್ಸ್ ಆ್ಯಪ್ ನಂಬರ್ ನೀಡಬೇಕೆಂದು ಪೀಠ ನಿರ್ದೇಶಿದೆ.
ಗ್ರಾ.ಪಂ, ತಾ.ಪಂ, ಜಿ.ಪಂ, ನಗರ ಪಾಲಿಕೆ, ವಿಧಾನಸಭೆ ಮತ್ತು ಲೋಕಸಭೆಯ ಹಾಲಿ-ಮಾಜಿ ಸದಸ್ಯರು ತಮ್ಮ ಖಾಸಗಿ ವಾಹನಗಳ ಮೇಲೆ ನೋಂದಣಿ ಸಂಖ್ಯೆ ಹೊರತುಪಡಿಸಿ, ಹೆಸರು, ಹುದ್ದೆ ಹಾಗೂ ಸರ್ಕಾರಿ ಲಾಂಛನ, ಚಿಹ್ನೆ ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಗಳನ್ನು ಒಳಗೊಂಡ ನಾಮಫಲಕ ಹಾಕಿಕೊಳ್ಳಬಾರದು.
ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳು ಅಥವಾ ಅರೆ ನ್ಯಾಯಿಕ ಸಂಸ್ಥೆಗಳ ಹೆಸರು, ಲಾಂಛನ-ಚಿಹ್ನೆಗಳನ್ನು ಹೋಲುವಂತಹ ಫಲಕಗಳನ್ನು ಖಾಸಗಿ ಸಂಘ, ಸಂಸ್ಥೆಗಳ ವಾಹನಗಳ ಮೇಲೆ ಅಳವಡಿಸಬಾರದು. ಈ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಂತಹ ಫಲಕಗಳನ್ನುತೆರವುಗೊಳಿಸಿ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ ಜ.3ರಂದೇ ಸರ್ಕಾರಕ್ಕೆ ನಿರ್ದೇಶಿಸಿದೆ.