ಬೆಂಗಳೂರು: ಅನುದಾನ ರಹಿತ ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಪ್ರತಿ ವರ್ಷವೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪ್ರತಿವರ್ಷ ಅರ್ಜಿ ಸಲ್ಲಿಸುವಂತೆ ಸರ್ಕಾರ ಬಲವಂತಪಡಿಸುತ್ತಿದೆ ಎಂದು ಆಕ್ಷೇಪಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಹಾಗೂ ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಪಿ. ಕೃಷ್ಣ ಭಟ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಕರ್ನಾಟಕ ಶಿಕ್ಷಣ ಕಾಯ್ದೆ-1983ರ ನಿಯಮ 36ರ ಪ್ರಕಾರ ಮಾನ್ಯತೆ ಅವಧಿ ಮುಗಿದ ನಂತರವೇ ಮಾನ್ಯತೆ ನವೀಕರಣ ಕೋರಿ ಅರ್ಜಿ ಸಲ್ಲಿಸಬೇಕಿದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ನೋಂದಣಿ) ನಿಯಮಗಳು-1999 ರ ನಿಯಮ 4(3) ಅಡಿ ಪಡೆದ ಮಾನ್ಯತೆಯು 10 ವರ್ಷಗ ಕಾಲ ಇರಲಿದ್ದು, ನವೀಕರಣವೂ 10 ವರ್ಷಗಳ ಅವಧಿಗೆ ಇರಲಿದೆ.
ಹಾಗಿದ್ದೂ, ಸರ್ಕಾರ ಮಾನ್ಯತೆ ನವೀಕರಣಕ್ಕೆ ಪ್ರತಿವರ್ಷ ಅರ್ಜಿ ಸಲ್ಲಿಸುವಂತೆ ಒತ್ತಾಯಿಸುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಆದರೆ, ಸರ್ಕಾರ ಆರೋಪಗಳನ್ನು ಅಲ್ಲಗಳೆದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಆಡಳಿತ ಮಂಡಳಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕುರಿತಂತೆ ಮಾತ್ರವೇ ಇಂತಹ ಸುತ್ತೋಲೆ ಹೊರಡಿಸಿರುವುದಾಗಿ ತಿಳಿಸಿದೆ.
ಮಾನ್ಯತೆ ಅವಧಿ ಕುರಿತಂತೆ ಯಾವುದೇ ವಿವಾದವಿಲ್ಲ ಎಂದು ಸ್ಪಷ್ಟಪಡಿಸಿದೆ. ಅರ್ಜಿದಾರರು ಸರ್ಕಾರದ ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡು ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿಯಲ್ಲಿ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.
ಇದೇ ವೇಳೆ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಅಗ್ನಿ ಸುರಕ್ಷತಾ ಮಾನದಂಡಗಳು ಹಾಗೂ ಸುಸಜ್ಜಿತ ಕಟ್ಟಡ ನಿರ್ವಹಣೆ ಕುರಿತಂತೆ ಸುಪ್ರೀಂಕೋರ್ಟ್ ಅವಿನಾಶ್ ಮೆಹ್ರೋತ್ರಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಅಂಡ್ ಅದರ್ಸ್ ಪ್ರಕರಣದಲ್ಲಿ ನೀಡಿರುವ ನಿರ್ದೇಶನಗಳನ್ನು ಪಾಲಿಸುವಲ್ಲಿ ಗಮನ ಹರಿಸುವಂತೆ ಸೂಚಿಸಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆಯ ಡಿಪಿಆರ್ಗೆ ಅನುಮೋದನೆ ಪಡೆಯಲು ಸರ್ವ ಪ್ರಯತ್ನ: ಸಿಎಂ