ಬೆಂಗಳೂರು: ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಮೂಡಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚನೆ ಮಾಡುವ ಅವಶ್ಯಕತೆ ಇಲ್ಲ. ಈ ಬಗ್ಗೆ ಚರ್ಚೆ ಆಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಇಂದು ದೆಹಲಿಗೆ ತೆರಳುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು 'ಸಮನ್ವಯ ಸಮಿತಿ ರಚನೆ ಅಗತ್ಯ ಇಲ್ಲ. ಇಂದು ದೆಹಲಿಯಲ್ಲಿ ವರಿಷ್ಠರ ಜೊತೆಗೆ ಬೇರೆ ಏನು ಚರ್ಚೆ ಆಗುತ್ತೋ, ಇಲ್ವೋ ಗೊತ್ತಿಲ್ಲ' ಎಂದರು.
ಕೆಲವು ಸಚಿವರಿಗೆ ಎಂಪಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ಚರ್ಚೆಯಾಗಿಲ್ಲ. ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಬಹುದು. ನಾನು ಈಗ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಈ ಬಗ್ಗೆ ಪಕ್ಷ ಅಂತಿಮವಾಗಿ ತೀರ್ಮಾನ ಮಾಡಲಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡಿದ್ದೆ. ಸದ್ಯಕ್ಕೆ ನನಗೆ ಸೂಚನೆ ಯಾವುದೂ ಬಂದಿಲ್ಲ. ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಬಹುದು, ಹೆಸರು ಕೇಳಬಹುದು. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ, ಎಲ್ಲರೂ ಬದ್ಧರಾಗಿರಬೇಕಾಗುತ್ತದೆ ಎಂದರು.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರ ಹುದ್ದೆಯನ್ನು ಕೆಲಸ ಮಾಡುವ ನಾಯಕರಿಗೆ ಕೊಡಿ ಎಂದು ಹೇಳಿದ್ದೇನೆ. ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೆ ಎಂಬುದು ಗೊತ್ತಿಲ್ಲ ಎಂದರು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ದೆಹಲಿಯಲ್ಲಿ ಹೈಕಮಾಂಡ್ ಸಭೆ ಕರೆದಿದೆ. ಹಾಗಾಗಿ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿರುವುದಾಗಿ ಹೇಳಿದರು. ಅಲ್ಲದೇ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲ ಸಚಿವರನ್ನು ಕರೆಯಲಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ ತಯಾರಿ ಹಿನ್ನೆಲೆ ವರಿಷ್ಠರ ಜೊತೆ ದೆಹಲಿಯಲ್ಲಿ ಸಭೆ, 50 ಕೈ ನಾಯಕರ ಭೇಟಿ: ಡಿ ಕೆ ಶಿವಕುಮಾರ್
ದೆಹಲಿಗೆ ಹೊರಟ ಸಿಎಂ, ಸಚಿವರು: ದೆಹಲಿಯಲ್ಲಿ ಇಂದು ಹೈಕಮಾಂಡ್ ಸಮ್ಮುಖದಲ್ಲಿ ನಡೆಯುವ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲಾ ಸಚಿವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ನಿನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದರು. ಇಂದು ಸಿಎಂ ಸಿದ್ದರಾಮಯ್ಯ, ಸಚಿವರಾದ ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಜಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್, ಎಂ.ಬಿ ಪಾಟೀಲ್, ಕೆ.ಜೆ.ಚಾರ್ಜ್, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಎನ್.ಎಸ್.ಬೋಸರಾಜು, ಮಧು ಬಂಗಾರಪ್ಪ, ಹೆಚ್.ಕೆ ಪಾಟೀಲ್, ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಸೇರಿದಂತೆ ಹಲವು ಸಚಿವರು ತೆರಳಿದ್ದಾರೆ.
ಇಂದು ನಡೆಯುವ ಸಭೆಯಲ್ಲಿ ಸಮನ್ವಯ ಸಮಿತಿ ರಚನೆ ಬಗ್ಗೆಯೂ ನಿರ್ಧಾರವಾಗುವ ಸಾಧ್ಯತೆ ಇದೆ. ಜತೆಗೆ ಮುಂಬರುವ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆಯೂ ಸಮಾಲೋಚನೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಈಗಲೇ ರಂಗೇರಿದ ಲೋಕಸಭೆ ಚುನಾವಣೆ ಕಣ: ಇಂದು ದೆಹಲಿಯಲ್ಲಿ ಮಹತ್ವದ ಸಭೆ, 50ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಭಾಗಿ!