ಬೆಂಗಳೂರು: ಜಿಂದಾಲ್ ಕಂಪನಿಯಿಂದ ಸರ್ಕಾರಕ್ಕೆ ಯಾವುದೇ ಹಣ ಬಾಕಿಯಿಲ್ಲ ಸರ್ಕಾರದ ಎಲ್ಲ ಷರತ್ತುಗಳನ್ನು ಪೂರೈಸಿದೆ. ಎಲ್ಲವನ್ನೂ ಪರಿಶೀಲಿಸಿಯೇ ಸರ್ಕಾರ ನಿರ್ಧಾರ ಮಾಡಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಸಂಪುಟದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಂದಾಲ್ಗೆ ಲೀಸ್ ಕಮ್ ಸೇಲ್ ಕೊಟ್ಟಿದ್ದೇವೆ. 1971ರಲ್ಲಿ ಎರಡು ಸಾವಿರ ಎಕರೆ ಜಮೀನು ಮಂಜೂರು ಮಾಡಿದ್ದಾರೆ. 6 ವರ್ಷದ ಒಳಗೆ ಸ್ಟೀಲ್ ಪ್ಲಾಂಟ್ ಮಾಡಲು ಕಂಡೀಷನ್ ಹಾಕಲಾಗಿತ್ತು. 1995ರಲ್ಲಿ 3 ಸಾವಿರ ಎಕರೆ ಜಮೀನು ಮಂಜೂರು ಮಾಡಿ ಮೈಸೂರು ಮಿನರಲ್ಸ್ನಿಂದ ಕಚ್ಚಾ ಸಾಮಗ್ರಿ ನೀಡಲು ಒಪ್ಪಿಗೆ ನೀಡಲಾಯಿತು. 2005ರಲ್ಲಿ ಕ್ಯಾಬಿನೆಟ್ ಪ್ರತಿ ಎಕರೆಗೆ 65 ಸಾವಿರ ರೂ.ನಂತೆ 350 ಎಕರೆ ಜಮೀನು ಮಂಜೂರಿಗೆ ಒಪ್ಪಿಗೆ ನೀಡಿತ್ತು. 2006ರಲ್ಲಿ 90 ಸಾವಿರ ರೂ. ಪ್ರತಿ ಎಕರೆಗೆ ನಿಗದಿಪಡಿಸಿ ಜಮೀನು ಲೀಸ್ ಕಮ್ ಸೇಲ್ ಮಾಡಲು ಒಪ್ಪಿಗೆ ನೀಡಲಾಗಿತ್ತು. ಅಂದು ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು, ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿ ಕೈಗಾರಿಕಾ ಸಚಿವರಾಗಿದ್ದರು. ಅಂದು ಹಾಕಿದ್ದ ಎಲ್ಲ ಷರತ್ತುಗಳನ್ನು ಪೂರೈಸಿದ್ದಾರೆ. ಹೀಗಾಗಿ ಜಮೀನನ್ನು ಜಿಂದಾಲ್ಗೆ ನೀಡಲಾಗಿದೆ ಎಂದು ಜಮೀನು ನೀಡಿಕೆ ವಿವಾದದ ಸಮಗ್ರ ಮಾಹಿತಿ ನೀಡಿದರು.
ಹೆಚ್.ಕೆ.ಪಾಟೀಲ್ ಹೇಳಿದಂತೆ ಜಿಂದಾಲ್ ಕಂಪನಿಯಿಂದ ಸರ್ಕಾರಕ್ಕೆ ಯಾವುದೇ ಬಾಕಿ ಇಲ್ಲ. ಜಿಂದಾಲ್ಗೆ ಜಮೀನು ನೀಡಿದ ವಿಚಾರದಲ್ಲಿ ಅಡ್ವೊಕೇಟ್ ಜನರಲ್ ನೀಡಿದ ವರದಿ ಸರಿಯಿದೆ. ಸುಪ್ರೀಂ ಕೋರ್ಟ್ನಲ್ಲಿ ಸಮಾಜ ಪರಿವರ್ತನಾ ಸಮುದಾಯ ಇದನ್ನು ಚಾಲೆಂಜ್ ಮಾಡಿದೆ. ಆದರೆ ಸುಪ್ರೀಂಕೋರ್ಟ್ ತೀರ್ಪು ಬರಲಿ ಎಂದು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
ಪಕ್ಷದ ನಿರ್ಧಾರಕ್ಕೆ ಬದ್ಧ:
ಮೈತ್ರಿ ಸರ್ಕಾರ ಮುಂದುವರೆಯಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಇದಕ್ಕಾಗಿ ಪಕ್ಷ ಯಾವುದೇ ನಿರ್ದೇಶನ ನೀಡಿದರೂ ಪಾಲಿಸಲು ಸಿದ್ಧರಿದ್ದೇವೆ. ನಾನು ಪಕ್ಷದ ಕಟ್ಟಾಳು, ಪಕ್ಷದ ನಿರ್ಧಾರ ಪಾಲಿಸುವುದಷ್ಟೇ ನಮ್ಮ ಕೆಲಸ. ಸಚಿವ ಸ್ಥಾನ ತೊರೆಯುವಂತೆ ಸೂಚಿಸಿದರೆ ಒಂದು ಕ್ಷಣವೂ ಯೋಚಿಸದೆ ರಾಜೀನಾಮೆ ಸಲ್ಲಿಸಲು ಸಿದ್ಧ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.