ಬೆಂಗಳೂರು : ಅನಾಮಧೇಯ ಪತ್ರ ಅಥವಾ ದೂರುಗಳು ಬಂದಲ್ಲಿ ಅದನ್ನು ಆಧರಿಸಿ ಸರ್ಕಾರಿ ನೌಕರರ ವಿರುದ್ದ ತನಿಖೆ ಮಾಡಬಾರದು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಪೂರ್ಣ ವಿಳಾಸ ಇರುವ ದೂರುಗಳನ್ನು ಆಧರಿಸಿ ತನಿಖೆಗೆ ಪರಿಗಣಿಸಬೇಕೆಂದು ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ಮಾದರಿಯಂತೆ ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರು ಅಥವಾ ಪತ್ರಗಳು ಬಂದಲ್ಲಿ ತನಿಖೆ ನಡೆಸಬೇಕಾದ ಅಗತ್ಯವಿಲ್ಲ. ಯಾವುದೇ ನೌಕರನ ವಿರುದ್ಧ ವಿಳಾಸ ಸಮೇತ ಇರುವ ದೂರುಗಳು ಬಂದರೆ ಮಾತ್ರ ತನಿಖೆ ನಡೆಸಬೇಕು, ಅನಾಮಧೇಯ ಪತ್ರ ಇಲ್ಲವೇ ದೂರುಗಳ ಅರ್ಜಿಗಳನ್ನು ಕಡತಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಸರ್ಕಾರಿ ನೌಕರರ ವಿರುದ್ಧ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಗ್ರಹ ಪೀಡಿತರಾಗಿ ಯಾವುದೇ ಆರೋಪಗಳಿಲ್ಲದಿದ್ದರೂ ತನಿಖೆ ನಡೆಸಬೇಕೆಂದು ಕೆಲವರು ದೂರು ಕೊಡುತ್ತಿದ್ದರು. ಇದರಿಂದ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗಿ ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತಿದ್ದು, ಜೊತೆಗೆ ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ನೌಕರರ ಸಂಘ ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಸಲ್ಲಿಸಿತ್ತು.
ಇತ್ತೀಚೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ನೇತೃತ್ವದ ನಿಯೋಗ, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅನಾಮಧೇಯ ದೂರು ಅಥವಾ ಪತ್ರಗಳ ಆಧಾರದ ಮೇಲೆ ತನಿಖೆ ನಡೆಸದಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಕೋರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಬಿಎಸ್ವೈ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಸಿಎಂ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ಅವರು ಇದೀಗ ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ಪತ್ರ ಅಥವಾ ದೂರುಗಳನ್ನು ಆಧರಿಸಿ ಕ್ರಮ ತೆಗೆದುಕೊಳ್ಳುವುದಾಗಲಿ, ಇಲ್ಲವೇ ತನಿಖೆ ಕೈಗೊಳ್ಳುವುದಾಗಲಿ ಮಾಡಬಾರದೆಂದು ಇಲಾಖೆಯ ಮುಖ್ಯಸ್ಥರಿಗೆ ಸುತ್ತೋಲೆಯಲ್ಲಿ ಆದೇಶಿಸಿದ್ದಾರೆ.