ಬೆಂಗಳೂರು: ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಗೊಂದಲವಿದ್ದು ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಪ್ರಜಾತಂತ್ರ ವ್ಯವಸ್ಥೆಯಂತೆ ಅಭ್ಯರ್ಥಿಗಳ ಆಯ್ಕೆ ಕುರಿತು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಇನ್ನೆರಡು ದಿನದಲ್ಲಿ ಪಕ್ಷದ ಹೈಕಮಾಂಡ್ಗೆ ಪಟ್ಟಿ ಕಳುಹಿಸಿ ಕೊಡಲಾಗುತ್ತದೆ. ಸಂಸದೀಯ ಮಂಡಳಿ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಪಕ್ಷ. ರಾಷ್ಟ್ರೀಯ ಅಧ್ಯಕ್ಷ, ರಾಜ್ಯಾಧ್ಯಕ್ಷ, ಮಂಡಲ ಅಧ್ಯಕ್ಷ, ಜಿಲ್ಲಾಧ್ಯಕ್ಷರು ಕೂಡ ಪ್ರಜಾತಂತ್ರ ವ್ಯವಸ್ಥೆ ಅಡಿಯಲ್ಲಿಯೇ ಎಲ್ಲರ ಅಭಿಪ್ರಾಯದಂತೆ ಆಯ್ಕೆಯಾಗುತ್ತದೆ. ಹಾಗೆಯೇ ಈ ಬಾರಿ ಅಭ್ಯರ್ಥಿಗಳ ಆಯ್ಕೆಯೂ ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ನಡೆಯುತ್ತದೆ.
ನಮ್ಮಲ್ಲಿ ವರ್ಷದ 365 ದಿನವೂ ಕೆಲಸ ಮಾಡುವ ಕಾರ್ಯಕರ್ತರು ಬೂತ್ ಮಟ್ಟದಲ್ಲಿದ್ದಾರೆ. ಕಾಂಗ್ರೆಸ್ನವರು ಕೆಲಸ ಮಾಡುವುದು ಕಡೆಯ ಎರಡು ತಿಂಗಳು ಮಾತ್ರ. ಅವರಿಗೆ ಕೇಡರ್ ಇಲ್ಲ, ಲೀಡರ್ ಇಲ್ಲ. ಸರ್ಕಾರ ಇರಲಿ, ಇಲ್ಲದಿರಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಸರ್ಕಾರ ಇಲ್ಲದಾಗ ಹೋರಾಟ ಮಾಡುತ್ತಾರೆ. ಸರ್ಕಾರ ಇದ್ದಾಗ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ. 43ನೇ ಪಕ್ಷದ ಸಂಸ್ಥಾಪನಾ ದಿನ ಆಚರಿಸಿದ್ದೇವೆ ಎಂದರು.
ಬೂತ್ ಮಟ್ಟಕ್ಕಿಂತ ಮೇಲಿನ ಸ್ಥಾನದಲ್ಲಿರುವ ನಾಯಕರಿಂದ ಅಭ್ಯರ್ಥಿಗಳ ಆಯ್ಕೆಗಾಗಿ ಮತದಾನ ಮಾಡಿಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಡುವ ಕೆಲಸ ಮಾಡಿದ್ದೇವೆ. ಅವರ ಅಭಿಪ್ರಾಯ ಕ್ರೋಢೀಕರಣ ಮಾಡುವ ಕೆಲಸ ಬಿಜೆಪಿ ರಾಜ್ಯ ಸಮಿತಿ ಮಾಡಿದೆ. ನಮ್ಮ ಕಾರ್ಯಕರ್ತರು ತಿಳಿಸಿರುವ ಅಭಿಪ್ರಾಯವನ್ನು ಯಥವತ್ತಾಗಿ ಕೇಂದ್ರಕ್ಕೆ ಕಳಿಸಲಾಗುತ್ತದೆ. ಎಲ್ಲ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸಲಾಗುತ್ತದೆ. ರಾಷ್ಟ್ರೀಯ ಪಕ್ಷವಾಗಿರುವ ಕಾರಣ ನಮ್ಮ ಎಲ್ಲ ನಿರ್ಧಾರ ಕೇಂದ್ರದಿಂದ ಆಗಲಿದೆ ಎಂದು ಹೇಳಿದರು.
ನಮ್ಮ ರಾಜ್ಯದ ನಾಯಕತ್ವ ಆಕಾಂಕ್ಷಿಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಪಟ್ಟಿ ಕಳುಹಿಸುತ್ತದೆ. ಕೇಂದ್ರದ ನಾಯಕತ್ವ ಅದಕ್ಕೆ ಫೈನಲ್ ಟಚ್ ಅಪ್ ಕೊಡುವ ಕೆಲಸ ಮಾಡುತ್ತದೆ. ಒಂದೇ ಹೆಸರನ್ನು ಪ್ರಕಟಿಸುವ ಕೆಲಸ ಮಾಡಲಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿದೆ. ಜೆಡಿಎಸ್ನಲ್ಲಿ ಯಾವ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್, ಒಂದು ಮನೆಯಲ್ಲಿ ಎಷ್ಟು ಜನಕ್ಕೆ ಟಿಕೆಟ್ ಕೊಡಬೇಕು ಎನ್ನುವ ಗೊಂದಲ ಇದೆ.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಎಷ್ಟು, ಡಿ.ಕೆ.ಶಿವಕುಮಾರ್ ಬೆಂಬಲಿಗರಿಗೆ ಎಷ್ಟು ಎನ್ನುವುದರ ಬಗ್ಗೆ ಚರ್ಚೆ ಮತ್ತು ಅದಕ್ಕಾಗಿ ಹೊಡೆದಾಟ ನಡೆಯುತ್ತಿದೆ. ಆದರೆ, ಬಿಜೆಪಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ಕಳೆದ ಎರಡು ದಿನ ಅಭಿಪ್ರಾಯ ಕ್ರೋಢೀಕರಣ ಮಾಡಿದ್ದು, ಇನ್ನೆರಡು ದಿನದಲ್ಲಿ ಆ ಅಭಿಪ್ರಾಯ ತಿಳಿಸಲಿದ್ದಾರೆ. ಅದಾದ ನಂತರ ಕೇಂದ್ರ ಎಲ್ಲ ಅಭಿಪ್ರಾಯ ಕ್ರೋಢೀಕರಿಸಿ ಒಂದು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಚಿವೆ ಮಾಹಿತಿ ನೀಡಿದರು.
ಇದನ್ನೂ ಓದಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಶಾಸಕ ಜಮೀರ್ ಅಹಮದ್ಗೆ ಹಿನ್ನಡೆ