ಬೆಂಗಳೂರು: ಹೆಲ್ತ್ ಕಿಟ್ ವಿತರಣೆಗೆ ವೇಳೆ ಅಧಿಕಾರಿಗಳು ಪಕ್ಷಪಾತ ಮಾಡಬಾರದು. ಸಭೆಗಳನ್ನು ಕಡಿಮೆ ಮಾಡಿ ಕೆಲಸ ಜಾಸ್ತಿ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾಕೀತು ಮಾಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಕೊರೊನಾ ಕುರಿತು ಸಿಎಂ ಬಿಎಸ್ವೈ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್ ಹಾಗೂ ಹೆಲ್ತ್ ಕಿಟ್ ವಿತರಣೆಗೆ ತಾಕೀತು ಮಾಡಿದರು. ಹೆಲ್ತ್ ಕಿಟ್ ವಿತರಿಸುವಾಗ ರಾಜಕೀಯ ತಲೆದೋರದಂತೆ ಸೂಚಿಸಿದ ಸಿಎಂ, ಪಕ್ಷಪಾತದಿಂದ ಅಧಿಕಾರಿಗಳು ವರ್ತಿಸಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಾನವಾಗಿ ಎಲ್ಲರಿಗೂ ಸಹಕರಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.
ಆಹಾರ ಹಂಚಿಕೆ ವಿಚಾರದಲ್ಲಿ ಗುಣಮಟ್ಟ ಕಾಪಾಡಬೇಕು. ಇಂದಿರಾ ಕ್ಯಾಂಟಿನ್ ಆಹಾರ ವಿತರಣೆಯಲ್ಲಿ ಗೋಲ್ಮಾಲ್ ಕುರಿತು ದೂರು ಬರುತ್ತಿದೆ ಎಂದು ಬಿಬಿಎಂಪಿ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಬಿಎಸ್ವೈ, ಇಂದಿರಾ ಕ್ಯಾಂಟಿನ್ ಆಹಾರದಲ್ಲಿ ಗುಣಮಟ್ಟ ಹಾಗೂ ಕ್ವಾಂಟಿಟಿ ಸರಿಯಾಗಿರಬೇಕು. ಮತ್ತೆ ದೂರುಗಳು ಬಂದರೆ ಬಿಬಿಎಂಪಿ ಅಧಿಕಾರಿಗಳನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ವೈದ್ಯರ ಸಲಹೆ ಪಡೆದು ಪಿಪಿಕೆ ಕಿಟ್ ಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಸಿಎಂ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಯಾ ಜಿಲ್ಲೆಯಲ್ಲೇ ಇರಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳಲ್ಲಿ ಸಮನ್ವಯತೆ ಇರಬೇಕು ಎಂದು ಸೂಚನೆ ನೀಡಿದರು.