ಬೆಂಗಳೂರು: ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ) ಕಬ್ಬಿಣದ ಅದಿರು ಉತ್ಪಾದನೆ ಜೊತೆಗೆ ಹಲವು ಸಾಮಾಜಿಕ ಕಳಕಳಿ ಮೆರೆಯುವ ಕಾರ್ಯದ ಮೂಲಕ ತನ್ನನ್ನು ಗುರುತಿಸಿಕೊಂಡಿದೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಎನ್ಎಂಡಿಸಿ ಪ್ರಮುಖವಾಗಿ ಗಮನ ಸೆಳೆಯುತ್ತಿದೆ. ದೇಶದ ಬಳಕೆಗೆ ಕಬ್ಬಿಣದ ಅದಿರು ಉತ್ಪಾದಿಸಿ ಕೊಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಸಂಸ್ಥೆ, ನೈಸರ್ಗಿಕ ಕಬ್ಬಿಣದ ಅದಿರು ಉತ್ಪಾದಿಸುವ ಮೂಲಕ ಸ್ಟೀಲ್ ಉತ್ಪಾದನೆಗೆ ಸಹಕಾರಿಯಾಗುವ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿರುವ ಕಾರ್ಯದ ಜೊತೆಗೆ ದೇಶದ ವಜ್ರದ ಉತ್ಪಾದನೆಯಲ್ಲಿ ಕೂಡ ವಿನೂತನ ತಂತ್ರಜ್ಞಾನ ಬಳಸಿ ಕಾರ್ಯನಿರ್ವಹಿಸುತ್ತಿದೆ. ಈ ರೀತಿ ಕಬ್ಬಿಣ ಹಾಗೂ ವಜ್ರದ ಗಣಿಗಾರಿಕೆಯಲ್ಲಿ ಅತ್ಯಂತ ತಜ್ಞತೆ ಹೊಂದಿರುವ ಸಂಸ್ಥೆ ರಾಷ್ಟ್ರದ ಗುಣಮಟ್ಟದ ಕಬ್ಬಿಣ ಮತ್ತು ವಜ್ರದ ಉತ್ಪಾದನೆಗೆ ಕೊಡುಗೆ ನೀಡುತ್ತಿದೆ.
ಸಾಮಾಜಿಕ ಕಳಕಳಿ ಕಾರ್ಯಕ್ರಮ:
ಕಬ್ಬಿಣದ ಅದಿರು ಹಾಗೂ ವಜ್ರದ ಗಣಿಗಾರಿಕೆ ಜೊತೆಗೆ ಸಂಸ್ಥೆ ಸಾಕಷ್ಟು ಸಾಮಾಜಿಕ ಕಳಕಳಿ ಮೆರೆಯುವ ಕಾರ್ಯ ಕೂಡ ಮಾಡುತ್ತಿದೆ. ಗುಡ್ಡಗಾಡು ಸಮುದಾಯಗಳ ಅನುಕೂಲಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆಸ್ಪತ್ರೆ ಹಾಗೂ ಶಾಲೆಗಳನ್ನು ನಿರ್ಮಿಸಿ ಇವರ ಬಳಕೆಗೆ ನೀಡಿದೆ ಎಂದು ಎನ್ಎಂಡಿಸಿ ಹೈದರಾಬಾದ್ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಡಾ. ಪ್ರಶಾಂತ್ ಶರ್ಮಾ ತಿಳಿಸಿದ್ದಾರೆ.