ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ನಿನ್ನೆ ವಾಯುಭಾರ ಕುಸಿತವಾಗಿದ್ದು, ಇವತ್ತು ಗಾಳಿಯ ವೇಗ ಹೆಚ್ಚಾಗಿದೆ. ನಾಳೆ ಬೆಳಗ್ಗೆ ಚಂಡಮಾರುತವಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ. ಈ 'ನಿಸರ್ಗ ಚಂಡಮಾರುತ' ರಾಜ್ಯದ ಮೇಲೂ ಪ್ರಭಾವ ಬೀರಿ ಬಳಿಕ ಉತ್ತರದ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರದ ಕಡೆ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ವಿಜ್ಞಾನಿ ಡಾ. ಸಿ ಎಸ್ ಪಾಟೀಲ್ ಈಟಿವಿ ಭಾರತಗೆ ತಿಳಿಸಿದರು.
ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇವತ್ತಿನಿಂದಲೇ ಮಳೆ ಪ್ರಾರಂಭವಾಗಿ ನಾಳೆಯಿಂದ ಎಲ್ಲೆಡೆ ಮಳೆಯಾಗಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಆದ್ರೆ ಬೆಂಗಳೂರಲ್ಲಿ ಜೋರು ಮಳೆ ಬರುವ ಸಾಧ್ಯತೆ ಇಲ್ಲ. ಆದ್ರೆ ಸೈಕ್ಲೋನ್ ಪ್ರಭಾವದಿಂದ ಸಾಧಾರಣ ಮಳೆಯಾಗಬಹುದು ಎಂದು ಸಿ.ಎಸ್ ಪಾಟೀಲ್ ತಿಳಿಸಿದರು.
ರಾಜ್ಯಕ್ಕೆ ವಾಡಿಕೆಗಿಂತ ಹೆಚ್ಚಿನ ಮುಂಗಾರು ಮಳೆ:
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ್ ರೆಡ್ಡಿ ಮಾತನಾಡಿ, ನಾಳೆ ಅಥವಾ ನಾಡಿದ್ದು ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಲಿದೆ. ನಮ್ಮ ರಾಜ್ಯ ಸೇರಿದ ಹಾಗೇ ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಗೂ ಮುನ್ಸೂಚನೆ ನೀಡಲಾಗಿದೆ. ಈ ಬಾರಿ ಶೇ. 102 ರಷ್ಟು ಮಳೆಯಾಗುತ್ತದೆ. ಒಟ್ಟಾರೆ ಸರಾಸರಿ ನೋಡಿದಾಗ ಶೇ. 80ರಷ್ಟು ವಾಡಿಕೆ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯಾಗುತ್ತದೆ. ಜುಲೈ, ಆಗಸ್ಟ್ನಲ್ಲಿಯೂ ಸಹ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದರು.