ಬೆಂಗಳೂರು: ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು, ವಿಜಯನಗರದಲ್ಲಿರುವ ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ದಿನದಿಂದಲೂ ನಿರಂತರವಾಗಿ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಕುಸುಮಾ, ರಾಜ್ಯ ನಾಯಕರು ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭ ಜೊತೆಯಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.
ಅವಕಾಶ ಸಿಕ್ಕ ಸಂದರ್ಭದಲ್ಲೆಲ್ಲ ವಿವಿಧ ದೇವಾಲಯಗಳಿಗೆ ಹಾಗೂ ಮಠಮಾನ್ಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಹಾಗೂ ಶ್ರೀಗಳಿಂದ ಆಶೀರ್ವಾದ ಪಡೆಯುವ ಕಾರ್ಯ ಮಾಡಿಕೊಂಡು ಬಂದಿದ್ದರು. ಇದರ ಭಾಗವಾಗಿಯೇ ಇಂದು ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಆದಿಚುಂಚನಗಿರಿ ಪೀಠಾಧಿಪತಿಗಳಾದ ಡಾ. ಶ್ರೀ. ನಿರ್ಮಲಾನಂದನಾಥ ಶ್ರೀಗಳು ಇದೇ ಸಂದರ್ಭ ಕುಸುಮಾ ಹನುಮಂತರಾಯಪ್ಪರಿಗೆ ಶಾಲು ಹೊದಿಸಿ, ಫಲ ಪ್ರಸಾದ ನೀಡಿ ಆಶೀರ್ವದಿಸಿದರು.
ಕುಸುಮಾ ತಂದೆ ಹನುಮಂತರಾಯಪ್ಪ, ತಾಯಿ ಭೈರಮ್ಮ ಜೊತೆಗಿದ್ದರು. ನಿನ್ನೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರುವ ಹಿನ್ನೆಲೆ ಇಂದು ಕುಸುಮಾ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ನಿನ್ನೆಯವರೆಗೂ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಎಲ್ಲ ನಾಯಕರು ಕ್ಷೇತ್ರ ವ್ಯಾಪ್ತಿಯಿಂದ ಹೊರಗೆ ತೆರಳಿದ್ದು, ಬೆರಳೆಣಿಕೆಯಷ್ಟು ಬೆಂಬಲಿಗರ ಜೊತೆ ಕುಸುಮಾ ಪ್ರಚಾರ ಕಾರ್ಯ ನಡೆಸಿದರು.