ಬೆಂಗಳೂರು: ನಗರದ ಪೂರ್ವ ತಾಲೂಕಿನ ಕ್ಯಾಲಸನಹಳ್ಳಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆಯ ಬೃಹತ್ ಕಟ್ಟಡ ನಿರ್ಮಾಣವಾಗಲಿದ್ದು, ಸಚಿವ ಆರ್. ಅಶೋಕ್ ಹಾಗೂ ಬಿ. ಎ. ಬಸವರಾಜ ಭೂಮಿ ಪೂಜೆ ನೆರವೇರಿಸಿದರು.
ಅತ್ಯಂತ ಹೆಚ್ಚು ಜನರಿರುವ ಕೆಆರ್ ಪುರ, ಮಹದೇವಪುರ ಸೇರಿದಂತೆ ಹಲವೆಡೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತಕ್ಕೀಡಾದ ರೋಗಿಗಳನ್ನು ನಿಮ್ಹಾನ್ಸ್‌ಗೆ ಕರೆತರುವಷ್ಟರಲ್ಲಿ ಅವರ ಪ್ರಾಣಕ್ಕೆ ಕುತ್ತು ಉಂಟಾಗುತ್ತಿತ್ತು. ಹೀಗಾಗಿ ಇಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರು ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ಕ್ಯಾಲಸನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಮೀನು ಹಸ್ತಾಂತರ ಪ್ರಕ್ರಿಯೆ ಮತ್ತು ಭೂಮಿಪೂಜೆ ನೆರೆವೇರಿಸಿದ್ರು.
ನಂತರ ಮಾತನಾಡಿದ ಸಚಿವ ಆರ್. ಅಶೋಕ್, ಬೆಂಗಳೂರಿನ ಉತ್ತರ ಭಾಗದಲ್ಲಿ ನಿಮ್ಹಾನ್ಸ್ ಆಸ್ಪತ್ರೆ ನಿರ್ಮಾಣದಿಂದ ಕೆಆರ್ ಪುರ, ಮಹದೇವಪುರ ಸೇರಿದಂತೆ ವಿವಿಧ ಭಾಗಗಳ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಜನರು ನಗರಕ್ಕೆ ಬರಬೇಕಾದರೆ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ರೋಗಿಯನ್ನು ನಗರದ ನಿಮ್ಹಾನ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಾರ್ಗ ಮಧ್ಯೆಯೆ ಜನರು ಮೃತಪಟ್ಟಿರುವ ಪ್ರಕರಣಗಳು ನಡೆದಿವೆ. ಆದ್ದರಿಂದ ಇಲ್ಲಿನ ಜನರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರದ ಸುಮಾರು 200 ಕೋಟಿ ಅನುದಾನದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗಲಿದ್ದು, ನಿಮ್ಹಾನ್ ಆಸ್ಪತ್ರೆ ನಿರ್ಮಾಣವಾದರೆ ಎರಡು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಬಹುದು ಆಗ ಸ್ಥಳೀಯರಿಗೆ ಹೆಚ್ಚು ಆದ್ಯತೆ ಕೊಡಬೇಕು ಎಂಬುದನ್ನು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಉದ್ದೇಶವಿದೆ. ಇದರಿಂದ ಈ ಭಾಗದಲ್ಲಿ ಐದರಿಂದ ಆರು ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಗ್ರಾಮದ ಜನರಿಗೆ ವಸತಿ ಕಲ್ಪಿಸಲು ಸಚಿವ ಬಸವರಾಜ ಈ ಜಾಗ ಪಡೆಯಬೇಕೆಂಬ ಉದ್ದೇಶ ಹೊಂದಿದ್ದರು. ಯಾವುದೇ ಕಾರಣಕ್ಕೂ ಈ ಗ್ರಾಮದ ಜನರಿಗೆ ಮೋಸ ಮಾಡುವುದಿಲ್ಲ. ಜನರ ನಿವೇಶನ ಕಲ್ಪಿಸಲು ಬೇರೆ ವ್ಯವಸ್ಥೆ ಮಾಡಲಾಗುವುದು. ಸಮೀಪದಲ್ಲಿಯೇ ಸೂಕ್ತವಾದ ಜಾಗ ಹುಡುಕಿ ಭೂಮಿ ಮಂಜೂರು ಮಾಡುವಂತೆ ತಹಶೀಲ್ದಾರ್ಗೆ ತಿಳಿಸಿದ್ದೇನೆ. ಹತ್ತಿರದಲ್ಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅಂತರರಾಷ್ಟ್ರೀಯ ರೋಗಿಗಳೂ ಇಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ವೇಳೆ ಮಾಜಿ ಶಾಸಕ ಹಾಗೂ ಬಿಎಂಟಿಸಿ ಸಾರಿಗೆ ಅಧ್ಯಕ್ಷ ನಂದೀಶ್ ರೆಡ್ಡಿ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ರು.