ಬೆಂಗಳೂರು : ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೊಳಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಆಗಸ್ಟ್ 23 ರಿಂದ 9 ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೂ ಬ್ಯಾಚ್ ವೈಸ್ ಶಾಲೆಗಳನ್ನ ಆರಂಭಿಸಲು ಸಮ್ಮತಿ ನೀಡಿದೆ.
ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು, ಕೋವಿಡ್ ಟಾಸ್ಕ್ ಫೋರ್ಸ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದರು.
ಕೋವಿಡ್ ನಿರ್ವಹಣೆ ಬಗ್ಗೆ ತಜ್ಞರನ್ನು ಕರೆಸಿ ಸಚಿವರು, ಅಧಿಕಾರಿಗಳ ಸಭೆ ನಡೆಸಲಾಗಿದೆ. ಈಗಿರುವ ಸ್ಥಿತಿಗತಿ ಕುರಿತು ಚರ್ಚೆ ಮಾಡಲಾಗಿದೆ. ಪಾಸಿಟಿವಿಟಿ ದರ ಹೆಚ್ಚಾಗುವ ಕುರಿತು ಚರ್ಚಿಸಿದ್ದು, ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರ, ಕೇರಳದಗಡಿ ಜಿಲ್ಲೆಯಲ್ಲಿ ಈಗಿರುವ ನೈಟ್ ಕರ್ಫ್ಯೂ ಜತೆ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ. ಇಡೀ ರಾಜ್ಯದಲ್ಲಿ ನೈಟ್ ಕರ್ಫ್ಯೂ ರಾತ್ರಿ 10ರ ಬದಲು 9ರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ ಎಂದರು.
ಶಾಲಾ-ಕಾಲೇಜು ಆರಂಭ ಕುರಿತು ಬೇರೆ ರಾಜ್ಯದಲ್ಲಿ ಏನಿದೆ ಎಂದು ಚರ್ಚಿಸಿ 9,10,11,12ನೇ ತರಗತಿಗಳನ್ನು ಆಗಸ್ಟ್ 23ರಿಂದ ಪ್ರಾರಂಭ ಮಾಡಲು ಅನುಮತಿ ನೀಡಲಾಗಿದೆ. ದಿನ ಬಿಟ್ಟು ದಿನದಂತೆ ಬ್ಯಾಚ್ ವೈಸ್ ಶಾಲೆಗಳನ್ನು ನಡೆಸಲು ಅನುಮತಿಸಲಾಗಿದೆ. ಕೋವಿಡ್ ನೋಡಿ ತಿಂಗಳ ಕೊನೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳ ಆರಂಭ ಕುರಿತು ತಜ್ಞರ ತೀರ್ಮಾನದಂತೆ ಅದನ್ನು ಜಾರಿಗೆ ತರಲಾಗುತ್ತದೆ ಎಂದರು.
ಇಂದೇ ಖಾತೆ ಹಂಚಿಕೆ
ಇಂದೇ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಮಾಡಲಿದ್ದು, ನಾಳೆ ನೂತನ ಕೋವಿಡ್ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತದೆ ಎಂದರು. ಸಭೆಯಲ್ಲಿ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ, ಡಾ. ಕೆ. ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ತಜ್ಞ ವೈದ್ಯರಾದ ಡಾ.ಸಿ ಎನ್ ಮಂಜುನಾಥ್, ಡಾ. ಸುದರ್ಶನ್, ಡಾ. ದೇವಿಪ್ರಸಾದ ಶೆಟ್ಟಿ ಸೇರಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.