ಬೆಂಗಳೂರು: ಅಡುಗೆ ಮಾಡುವ ಪ್ರೆಷರ್ ಕುಕ್ಕರ್ನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ ದೇಶ, ವಿದೇಶಗಳಿಗೆ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಬೆಂಜಮಿನ್ ಬಂಧಿತ ಆರೋಪಿ. ಈತನಿಂದ ₹10 ಕೋಟಿ ಮೌಲ್ಯದ ಎಂಡಿಎಂಎ ಹಾಗೂ ಅದರ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಮತ್ತು ರಾಸಾಯನಿಕ ಆಮ್ಲ ಸೇರಿದಂತೆ ಮತ್ತಿತರ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಅವಲಹಳ್ಳಿಯ ತನ್ನ ಮನೆಯಲ್ಲಿಯೇ ಕಚ್ಚಾ ಪದಾರ್ಥಗಳನ್ನು ಬಳಸಿ ಪ್ರೆಷರ್ ಕುಕ್ಕರ್ನಲ್ಲಿ ಸಿಂಥೆಟಿಕ್ ಡ್ರಗ್ ತಯಾರಿಸುತ್ತಿದ್ದ. ನಂತರ ಅವುಗಳನ್ನು ರಾಜ್ಯ, ಅನ್ಯರಾಜ್ಯ ಸೇರಿದಂತೆ ವಿದೇಶಗಳ ಗಿರಾಕಿಗಳು ಹಾಗೂ ಮಾದಕ ಸರಬರಾಜುಗಾರರಿಗೆ ಮಾರಾಟ ಮಾಡುತ್ತಿದ್ದ. ಆರಂಭದಲ್ಲಿ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಈತನನ್ನು 100 ಗ್ರಾಂ ಎಂಡಿಎಂಎಸಹಿತ ಬಂಧಿಸಲಾಗಿತ್ತು. ಆದರೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಅವಲಹಳ್ಳಿಯ ತನ್ನ ಮನೆಯಲ್ಲಿಯೇ ಸಣ್ಣ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವ ವಿಚಾರ ಬಯಲಾಗಿತ್ತು.
ವ್ಯಾಪಾರಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಆರೋಪಿಯ ವೀಸಾ ಅವಧಿ 2022ರಲ್ಲಿ ಅಂತ್ಯವಾಗಿದೆ. ಆದರೆ, 2021ರಲ್ಲಿ ಬಟ್ಟೆ ವ್ಯಾಪಾರ ಮಾಡುವುದಾಗಿ ಮನೆ ಬಾಡಿಗೆಗೆ ಪಡೆದು ನಗರದಲ್ಲಿ ವಾಸವಿದ್ದ. ಈ ಹಿಂದೆ ಹೈದರಾಬಾದ್ನಲ್ಲಿ ಬಂಧನವಾಗಿದ್ದ ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ.
ಸದ್ಯ ಆರೋಪಿಯಿಂದ ₹10 ಕೋಟಿ ಮೌಲ್ಯದ 5 ಕೆಜಿ ಎಂಡಿಎಂಎ, ಡ್ರಗ್ಸ್ ತಯಾರಿಸಲು ಬೇಕಾದ ಕಚ್ಚಾ ಪದಾರ್ಥಗಳು, 5 ಲೀಟರ್ ಪ್ರೆಷರ್ ಕುಕ್ಕರ್, ಸ್ಟೌವ್, ಗ್ಯಾಸ್ ಸಿಲಿಂಡರ್, 1 ಮೊಬೈಲ್ ಫೋನ್, ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದೊಂದು ಬಹುದೊಡ್ಡ ಕಾರ್ಯಾಚರಣೆ. ಬಂಧಿತನ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಮತ್ತು ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನವೆಂಬರ್ 20ರವರೆಗೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಮರ್ಮಾಂಗದಲ್ಲಿಟ್ಟು ಕೋಟ್ಯಂತರ ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಮಹಿಳೆ ವಶಕ್ಕೆ
ಮಂಗಳೂರಲ್ಲಿ ಮಾದಕ ವಸ್ತು ಮಾರಾಟ: ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ನವೆಂಬರ್ 7ರಂದು ಬಂಧಿಸಿದ್ದರು. ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ನೀರು ಎಂಬಲ್ಲಿ ಲಾಡ್ಜ್ವೊಂದರ ಬಳಿ ಈ ಮೂವರು ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದರು.
ಇದನ್ನೂ ಓದಿ: ಮಂಗಳೂರಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮಡಿಕೇರಿಯ ಮೂವರು ಅರೆಸ್ಟ್