ಬೆಂಗಳೂರು: ಆಸ್ಪತ್ರೆ ಇಲ್ಲ, ಆಪರೇಷನ್ ಥಿಯೇಟರ್ ಇಲ್ಲ, ವೈದ್ಯರಂತೂ ಇಲ್ಲವೇ ಇಲ್ಲ, ಇವೆಲ್ಲ ಇಲ್ಲಗಳ ನಡುವೆ ಕಿಡ್ನಿ ಆಪರೇಷನ್ ಮತ್ತು ದಾನದ ಹೆಸರಲ್ಲಿ ಕೋಟ್ಯಂತರ ರೂಪಾಯಿಗಳನ್ನ ಅಮಾಯಕರಿಗೆ ಅಕ್ರಮ ವಲಸಿಗರು ಪಂಗನಾಮ ಹಾಕಿರುವ ರೋಚಕ ವರದಿ ಇದು.
ಕೇವಲ ವೆಬ್ಸೈಟ್ಗಳಲ್ಲಿ ಆಕರ್ಷಕ ಜಾಹೀರಾತು ನೀಡಿ ಕಿಡ್ನಿ ಆಪರೇಷನ್ ಮಾಡಲಾಗುತ್ತದೆ ಹಾಗೂ ಕಿಡ್ನಿ ದಾನ ಮಾಡಿದವರಿಗೆ ಅಪಾರ ಹಣ ನೀಡಲಾಗುತ್ತದೆ ಎಂದು ಭರವಸೆ ನೀಡಿ ಕೋಟಿಗಟ್ಟಲೇ ಹಣವನ್ನು ದೋಚಿದ್ದ ವಿದೇಶದ ' ನೈಜೀರಿಯಾ ' ಪ್ರಜೆಗಳಿರುವ ಗ್ಯಾಂಗ್ನ್ನು ಸಿಲಿಕಾನ್ ಸಿಟಿ ಪೊಲೀಸರು ಸೆರೆ ಹಿಡಿದು ಕರಾಳ ದಂಧೆಯನ್ನು ಬಯಲು ಮಾಡಿದ್ದಾರೆ.
ರಾಜಧಾನಿಯ ಪ್ರತಿಷ್ಠಿತ ಆಸ್ಪತ್ರೆಯ ಸೋಗಿನಲ್ಲಿ ನಕಲಿ ವೆಬ್ಸೈಟ್ ಹಾಗೂ ಇ-ಮೇಲ್ ಸೃಷ್ಟಿಸಿಕೊಂಡು ಕಿಡ್ನಿ ಮಾರಾಟ ಹಾಗೂ ಖರೀದಿಸುವ ಜಾಹೀರಾತು ನೀಡಿ ಅಮಾಯಕರಿಂದ ಸಹಸ್ರಾರು ಕೋಟಿ ರೂ. ಟೋಪಿ ಹಾಕಿದ್ದ ಮೂವರು ನೈಜೀರಿಯಾ ಪ್ರಜೆಗಳು ಸೇರಿದಂತೆ ಒಟ್ಟು ಆರು ಮಂದಿ ದಂಧೆಕೋರರನ್ನು ಸೆರೆಹಿಡಿಯುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೈಜಿರಿಯಾದ ಎಸೆನ್ ಲವ್ಲಿ, ಮೊಹಮ್ಮದ್ ಅಹ್ಮದ್ ಇಸ್ಮಾಯಿಲ್, ಸೂಡಾನ್ ದೇಶದ ಮರ್ವಾನ್, ತ್ರಿಪುರಾ ರಾಜ್ಯದ ಹಿರೇಂದ್ರ, ಕೆಮಿ ರಂಜನ್ ಹಾಗೂ ಜತಿನ್ ಕುಮಾರ್ ಎಂಬುವರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ವರ್ಷ ಡಿ.30 ರಂದು ಬಾಣಸವಾಡಿಯ ಎಚ್. ಬಿ.ಆರ್ ಲೇಔಟ್ ನಲ್ಲಿರುವ ಸ್ಪೆಷಲಿಸ್ಟ್ ಆಸ್ಪತ್ರೆಯ ಡೈರೆಕ್ಟರ್ ಡಾ.ಶಫೀಕ್ ಎಂಬುವರು ಆಸ್ಪತ್ರೆ ಹೆಸರಿನಲ್ಲಿ ಚಂದ್ರು ಎಂಬ ವ್ಯಕ್ತಿಯು ಕಿಡ್ನಿ ಮಾರಾಟ ಮಾಡುವುದಾಗಿ ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಠಾಣೆಯಲ್ಲಿ ದಾಖಲೆ ಸಮೇತ ದೂರು ನೀಡಿದ್ದರು. ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ದಂಧೆಯ ಕರಾಳ ಮುಖ ಅನಾವರಣಗೊಂಡಿದೆ.
ದಂಧೆಯು ದೊಡ್ಡ ಮಟ್ಟದಲ್ಲಿ ನಡೆದಿರುವುದನ್ನು ಗ್ರಹಿಸಿದ ಪೊಲೀಸರು ಮೊದಲು ಆರೋಪಿಗಳು ಬಳಸುತ್ತಿದ್ದ ನಕಲಿ ವೆಬ್ಸೈಟ್, ವಾಟ್ಸ್ಯಾಪ್ ಸಂದೇಶಗಳು, ಇ-ಮೇಲ್ ಆಧರಿಸಿ ತನಿಖೆಯ ಜಾಡು ಹಿಡಿದು ಮೊದಲು ತ್ರಿಪುರಾ ರಾಜ್ಯದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತದ ನಂತರ ಇವರು ನೀಡಿದ ಮಾಹಿತಿ ಆಧರಿಸಿ ಮತ್ತೆ ಮೂವರು ವಿದೇಶಿ ಪ್ರಜೆಗಳನ್ನು ಸೆರೆಹಿಡಿದಿದ್ದಾರೆ.
ದಂಧೆಯ ರೂಪುರೇಷೆ ಹೇಗಿತ್ತು?
ಅಮಾಯಕರನ್ನು ನಂಬಿಸಲು ಸೆಷ್ಟಲಿಸ್ಟ್ ಆಸ್ಪತ್ರೆಯ ವೈದ್ಯರ ಹೆಸರಿನಲ್ಲಿ ಸೇಲ್ ಕಿಡ್ನಿ ಎಂಬ ಹೆಸರಿನಲ್ಲಿ ನಕಲಿ ವೆಬ್ಸೈಟ್ ತೆರೆದಿದ್ದರು. Dr.gokulakrishnan22@gmail.com ಹೆಸರಿನಲ್ಲಿ ಇಮೇಲ್ ಸೃಷ್ಟಿಸಿಕೊಂಡು ಆಸ್ಪತ್ರೆ ವತಿಯಿಂದ ಕಿಡ್ನಿ ಮಾರಾಟ ಹಾಗೂ ಖರೀದಿಸುವುದಾಗಿ ಜಾಹೀರಾತು ನೀಡಿದ್ದರು. ತ್ರಿಪುರಾ ರಾಜ್ಯದ ಆರೋಪಿಗಳಿಗೆ ಹಣ ಆಮಿಷ ತೋರಿಸಿ ಅವರನ್ನು ದಂಧೆಯಲ್ಲಿ ಸಕ್ರಿಯವಾಗಿರಿಸಿಕೊಂಡ ನೈಜೀರಿಯಾ ಮೂಲದ ಆರೋಪಿಗಳು ಸುಮಾರು 200ಕ್ಕೂ ಹೆಚ್ಚು ಅಮಾಯಕರನ್ನು ಸಂಪರ್ಕಿಸಿದ್ದಾರೆ. ಅವರ ಬಳಿಯಿಂದ ಇನ್ಶ್ಯೂರೆನ್ಸ್ ಮಾಡಿಸುವುದಕ್ಕೆ ಶುಲ್ಕ ಕಟ್ಟಬೇಕೆಂದು ಹೇಳಿ ಪ್ರತಿಯೊಬ್ಬರಿಂದ ಸುಮಾರು 50-60 ಸಾವಿರ ರೂ. ಹಣ ಪಡೆಯುತ್ತಿದ್ದರು. ಇದೇ ರೀತಿ ಆರೋಪಿಗಳು 300 ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಸದ್ಯ ಬಂಧಿತರಿಂದ ಬ್ಯಾಂಕ್ ಪಾಸ್ಬುಕ್, ಸಿಮ್ ಕಾರ್ಡ್, ಎಟಿಎಂ, ಚೆಕ್ ಬುಕ್, ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ವಿದೇಶಿ ಆರೋಪಿಗಳು ಪಾಸ್ಪೋರ್ಟ್ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸವಾಗಿರುವುದು ಗೊತ್ತಾಗಿದೆ.