ಬೆಂಗಳೂರು: ನೇತ್ರ ಚಿಕಿತ್ಸಾ ವೈದ್ಯ ಶಂಕಿತ ಉಗ್ರ ಡಾ.ಅಬ್ದುಲ್ ರೆಹಮಾನ್ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶದಲ್ಲಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣವನ್ನು ಮುಂದಿಟ್ಟುಕೊಂಡು ಆತನ ಲಿಂಕ್ ಬಗ್ಗೆ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ಸಿಸಿಬಿ ವಶದಲ್ಲಿರುವ ಸಮೀಯುದ್ದೀನ್, ರೆಹಮಾನ್ ಹಾಗು ರೆಹಮಾನ್ ಸ್ನೇಹಿತರು ಒಂದೇ ತಂಡದಲ್ಲಿದ್ದವರು ಎನ್ನುವುದು ತಿಳಿದುಬಂದಿದೆ. ಹೀಗಾಗಿ ಡಾಕ್ಟರ್ ರೆಹಮಾನ್ ಹೇಳಿಕೆಯ ಆಧಾರದ ಮೇರೆಗೆ ವಾರೆಂಟ್ ಮೂಲಕ ಸಮೀಯುದ್ದೀನ್ ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.
ಈ ಶಂಕಿತ ಉಗ್ರ ಸೆರೆಸಿಕ್ಕಿದ್ದು ಹೇಗೆ?
ಅಬ್ದುಲ್ ರೆಹಮಾನ್ ಬಂಧನ ಆಗಿದ್ದು ಒಂದು ರೋಚಕ ಕಥೆ. ಅಮೆರಿಕದ ಮೇಲೆ ಉಗ್ರರು ದಾಳಿ ನಡೆಸಿದ ವೇಳೆ ಸ್ಥಳದಲ್ಲಿ ಅಬ್ದುಲ್ ರೆಹಮಾನ್ ಕಳುಹಿಸಿದ್ದ ಮೆಡಿಸಿನ್ಗಳು ಅಲ್ಲಿ ಪತ್ತೆಯಾಗಿದ್ದವು. ಇದನ್ನು ಕಂಡ ಅಮೆರಿಕ ಸಿಕ್ಕ ದಾಖಲೆಗಳನ್ನು ಭಾರತಕ್ಕೆ ಹಸ್ತಾಂತರಿಸಿತ್ತು.
ಆ ರಹಸ್ಯಗಳ ಬೆನ್ನು ಹತ್ತಿದ್ದ ಎನ್ಐಎ ವಿಶೇಷ ತಂಡ ಮತ್ತು ಗುಪ್ತಚರ ಇಲಾಖೆಗೆ ಈ ಘಟನೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ISKP) ಸಂಘಟನೆಯ ಪಾತ್ರದ ಬಗ್ಗೆ ಗೊತ್ತಾಗಿದೆ. ತಕ್ಷಣ ಕಾಶ್ಮೀರ ಮೂಲದ ಉಗ್ರ ದಂಪತಿಯನ್ನು ಬಂಧಿಸಲಾಗಿದೆ. ಇವರ ವಿಚಾರಣೆ ವೇಳೆ ಅಬ್ದುಲ್ ರೆಹಮಾನ್ ಜಾಡು ಪತ್ತೆಯಾದ ಕಾರಣ ಸದ್ಯ ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.
ತೀವ್ರಗೊಂಡ ಸಮೀಯುದ್ದೀನ್ ವಿಚಾರಣೆ
ಸಿಸಿಬಿ ಪೊಲೀಸರು ಸಮೀಯುದ್ದಿನ್‌ನನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಸಮೀಯುದ್ದೀನ್ ಉಗ್ರರ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಹಾಗೂ ಹಲವು ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಗಲಭೆ ಹಿಂದೆ ಈತನ ಕೈವಾಡ ಇರುವುದು ಸಹ ದೃಢವಾಗಿದೆ.