ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಹಿನ್ನೆಲೆ ಕಳೆದ ವರ್ಷ ಕೇಂದ್ರ ವಾಣಿಜ್ಯ ವಲಯದಲ್ಲಿ ಜನಸಂದಣಿಗೆ ಅವಕಾಶ ಇತ್ತು. ಸದ್ಯ ಕೊರೊನಾ ಇರುವ ಕಾರಣ ಈ ಬಾರಿ ಹೊಸ ವರ್ಷದ ಆಚರಣೆಗೆ ಕಡಿವಾಣ ಹಾಕಲಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಈ ಬಾರಿ ಹೊಸ ವರ್ಷ ಆಚರಣೆಯಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಅಲ್ಲದೆ ಹಲವು ಕಡೆ ರಸ್ತೆ ಹಾಗೂ ಫೈಓವರ್ ಸಹ ಬಂದ್ ಮಾಡಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ಅವರು, ಈ ಬಾರಿ ರಸ್ತೆಗಳ ಮೇಲೆ ಹೊಸ ವರ್ಷ ಆಚರಣೆಗೆ ನಿಷೇಧವಿದೆ. ಈ ಹಿನ್ನೆಲೆ ಎಂ.ಜಿ ರಸ್ತೆ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಪ್ರಮುಖ ರಸ್ತೆಗಳಲ್ಲಿ ನಾಳೆ ರಾತ್ರಿ 8 ಗಂಟೆಯಿಂದ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ರಸ್ತೆಗಳಲ್ಲಿ ಯಾರೂ ಓಡಾಟ ಮಾಡುವಂತಿಲ್ಲ.
ಹೋಟೆಲ್ಗಳಿಗೆ ಹೋಗಬೇಕಾದರೂ ಕೂಡ ಹೋಟೆಲ್ನಲ್ಲಿ ಮೊದಲೇ ಬುಕ್ಕಿಂಗ್ ಮಾಡಿಕೊಂಡಿರಬೇಕು. ಪೊಲೀಸರು ಬುಕ್ಕಿಂಗ್ ಪಾಸ್ ಇಲ್ಲದವರನ್ನು ಈ ರಸ್ತೆಗಳ ಬಳಿ ಹೋಗಲು ಬಿಡುವುದಿಲ್ಲ. ಹಾಗೆ ಈ ಸ್ಥಳಗಳಿಗೆ ಹೋಗಬೇಕಾದರೆ 5 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬುಕ್ಕಿಂಗ್ ಇಲ್ಲದವರಿಗೆ ಯಾವುದೇ ರೀತಿಯಾದ ಅನುಮತಿ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಮೇಲ್ಸೇತುವೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದ್ದು, ಡ್ರ್ಯಾಗ್ ರೇಸ್ ವೀಲಿಂಗ್, ಅತಿ ವೇಗದ ಚಾಲನೆಗಳಿಗೆ ಯಾವುದೇ ಅವಕಾಶ ಇರುವುದಿಲ್ಲ. ರಾತ್ರಿ 10 ಗಂಟೆಗೆ ಹೊರವಲಯ ಮತ್ತು ಒಳವಲಯದ ಎಲ್ಲಾ ಫ್ಲೈ ಓವರ್ಗಳನ್ನು ಬಂದ್ ಮಾಡಲಾಗುತ್ತದೆ. ಪ್ರಮುಖವಾಗಿ ಏರ್ಪೋರ್ಟ್ ಎಲಿವೆಟೆಡ್ ರಸ್ತೆಗಳನ್ನು ಮುಚ್ಚಲಾಗುತ್ತದೆ. ಪ್ರತಿಯೊಬ್ಬರೂ ಫ್ಲೈಓವರ್ ಕೆಳಗಡೆ ಇರುವ ರಸ್ತೆಗಳನ್ನು ಬಳಕೆ ಮಾಡಬೇಕಾಗಿದೆ ಎಂದಿದ್ದಾರೆ.
ಸುಮಾರು 2 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಸುಮಾರು 60 ಸೆಕ್ಟರ್, 668 ಚೆಕ್ ಪೋಸ್ಟ್ ಹಾಕಿ ಟ್ರಾಫಿಕ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮತ್ತೊಂದೆಡೆ ಮದ್ಯ ಸೇವನೆ ಮಾಡುವ ಚಾಲಕರ ಚಾಲನಾ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಖಡಕ್ ಆಗಿ ಸೂಚಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ ನೆಪದಲ್ಲಿ ನಿಯಮ ಮೀರಿದ್ರೆ ಕಠಿಣ ಕ್ರಮ: ರವಿಕಾಂತೇಗೌಡ