ಬೆಂಗಳೂರು/ಬೆಳಗಾವಿ: ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆಯ ಹಿನ್ನೆಲೆ ಬೆಳಗಾವಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೂತನ ಹಲವು ಕಾಂಗ್ರೆಸ್ ಶಾಸಕರು ಆಗಮಿಸಿದ್ರು. ಶಾಸಕರಾದ ಲಕ್ಷಣ್ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಈಶ್ವರ್ ಖಂಡ್ರೆ ಸೇರಿದಂತೆ ಹಲವು ನೂತನ ಶಾಸಕರು ಆಗಮಿಸಿದರು.
ಈ ವೇಳೆ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಲಕ್ಷ್ಮಣ್ ಸವದಿ ಮಾತನಾಡಿದ್ದು, ಇಡೀ ರಾಜ್ಯದ ಜನ ಬಿಜೆಪಿಯನ್ನ ತಿರಸ್ಕಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ವಷ್ಟವಾದ ಬಹುಮತ ನೀಡಿದ್ದಾರೆ ಎಂದರು. ಜೊತೆಗೆ ಬಿಜೆಪಿ ಪಕ್ಷದ ಆಡಳಿತದಿಂದ ಜನರು ಬೇಸತ್ತಿದ್ರು. ಬಿಜೆಪಿ ನಾವು ನಡೆದಿದ್ದೆಲ್ಲ ಸರಿ ಎನ್ನುವ ಭಾವನೆಯಿಟ್ಟುಕೊಂಡಿತ್ತು. ರಾಜ್ಯದ ಜನ ಅದಕ್ಕೆ ಮನ್ನಣೆ ನೀಡಿಲ್ಲ. ಶೆಟ್ಟರ್ ಅವರು ಸೋತಿದ್ದಾರೆ. ಅವರಿಗೆ ಸ್ಥಾನಮಾನ ನೀಡುವ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು. ನಾನು ಹೊಸದಾಗಿ ಪಕ್ಷಕ್ಕೆ ಬಂದಿದ್ದೇನೆ. ಕೊಡಿ ಅಂತ ನಾನು ಹೇಳಲು ಆಗುವುದಿಲ್ಲ ಎಂದರು.
ನೂತನ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಮೊದಲನೆಯದಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಜನರಿಗೆ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ. ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಮ್ಮ ಪಕ್ಷದ ಮೇಲೆ ಭರವಸೆಯನ್ನು ಇಟ್ಟು ನಮಗೆ ಆಶೀರ್ವಾದವನ್ನು ಮಾಡಿದ್ದಾರೆ. ನಾವು ಜನರಿಗೆ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಹೇಳಲು ಬಯಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಇಲ್ಲ, ನಿವೃತ್ತಿ ಅನ್ನೋದೆಲ್ಲ ನಾಟಕ: ವಿ.ಸೋಮಣ್ಣ
ಇದೇ ವೇಳೆ ಪಾಕಿಸ್ತಾನ ಜಿಂದಾಬಾದ್ ವಿಡಿಯೋ ವೈರಲ್ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಶಾಸಕ ರಾಜು ಸೇಠ್, ಪಾಕಿಸ್ತಾನ ಜಿಂದಾಬಾದ್ ಎನ್ನುವುದು ಫೇಕ್ ವಿಡಿಯೋ, ಬಿಜೆಪಿಯವರು ಇಂತಹ ಕೆಲಸ ಮಾಡ್ತಿದ್ದಾರೆ. ಕಳೆದ ಚುನಾವಣೆಯ ಸಂದರ್ಭದಲ್ಲೂ ಸಹ ಇದನ್ನೇ ಬಿಜೆಪಿಯವರು ಮಾಡಿದ್ದರು. ಈ ಕುರಿತು ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕ ನೂತನ ಸಿಎಂ ಆಯ್ಕೆ ವಿಚಾರ 'ಕೈ' ನಾಯಕಿ ಸೋನಿಯಾ ಗಾಂಧಿ ಅಂಗಳಕ್ಕೆ
ಬೆಂಗಳೂರಿನಲ್ಲಿ ಸಿಎಲ್ಪಿ ಸಭೆ ಇದೆ: ಕರ್ನಾಟಕಕ್ಕೆ ಈಗ ಅಚ್ಛೇದಿನ್ ಬಂತು ಎಂದ ರಾಜು ಸೇಠ್, ಮುಖ್ಯಮಂತ್ರಿ ಯಾರಾಗಬೇಕು ಅಂತ ಹೈಕಮಾಂಡ್ ಡಿಸೈಡ್ ಮಾಡುತ್ತದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ ಐಡಿಯಾಲಾಜಿಯಿಂದ ಅತೀ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಸಂಜೆ ಬೆಂಗಳೂರಿನಲ್ಲಿ ಸಿಎಲ್ಪಿ ಸಭೆ ಇದೆ. ಹೀಗಾಗಿ ಹೊರಟಿದ್ದೇವೆ ಎಂದರು.
ಇದನ್ನೂ ಓದಿ: ಇದು ಪ್ರಧಾನಿ ಮೋದಿ ಸೋಲಲ್ಲ, ಕಾಂಗ್ರೆಸ್ ನಾಯಕತ್ವ ದೇಶದಲ್ಲೇ ಸೋತಿದೆ: ಬೊಮ್ಮಾಯಿ
26 ಸಾವಿರ ಮತಗಳ ಲೀಡ್ ಬಂತು: ಇದೇ ವೇಳೆ ನೂತನ ಶಾಸಕ ಮಹೇಂದ್ರ ತಮ್ಮಣ್ಣವರ್ ಮಾತನಾಡಿ, ಕಳೆದ ಬಾರಿಯೇ ನನಗೆ ಟಿಕೆಟ್ ನೀಡಿದ್ದರೆ ನಾನು ಗೆಲ್ತಿದ್ದೆ. ಇನ್ನೂ ಲೀಡ್ ನಿರೀಕ್ಷೆ ಮಾಡಿದ್ದೆ. ಆದರೆ ಅಷ್ಟು ಲೀಡ್ ಪಡೆಯಲು ಸಾಧ್ಯವಾಗಲಿಲ್ಲ. 35 ಸಾವಿರ ಲೀಡ್ ಹಿಡಿದುಕೊಂಡಿದ್ದೆ. ಆದರೆ 26 ಸಾವಿರ ಮತಗಳ ಲೀಡ್ ಬಂತು. ಕಳೆದ ಮೂರು ಚುನಾವಣೆಯಿಂದ ನಾನು ಜನರ ಸಂಪರ್ಕದಲ್ಲಿದ್ದೇನೆ ಎಂದರು.
ಕಳೆದ ಬಾರಿಯೇ ನಾನು ಟಿಕೆಟ್ ಕೇಳಿದ್ದೆ. ಆದರೆ ಈ ಬಾರಿ ಟಿಕೆಟ್ ಕೊಟ್ರು. ದೇಶದ ಪ್ರಧಾನಿಯನ್ನು ತಂದು ಗ್ರಾಮ ಪಂಚಾಯತಿ ಮಟ್ಟಕ್ಕೆ ಪ್ರಚಾರಕ್ಕೆ ತಂದಿದ್ದು ದುರ್ದೈವ. ಜಿಲ್ಲಾ ಲೆವೆಲ್ಗೆ ಬರುತ್ತಾರೆ ಎಂಬುದನ್ನು ಕೇಳಿದ್ದೇವೆ. ಕುಡಚಿಗೆ ಮೂಲಭೂತವಾಗಿ ಏನು ಬೇಕೋ ನನಗೆ ಗೊತ್ತು. ನಾನು ಅಭಿವೃದ್ಧಿ ಮಾಡ್ತಿನಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಡಚಿ ಕ್ಷೇತ್ರದ ಕೋಳಿಗುಡ್ಡಕ್ಕೆ ಪ್ರಧಾನಿ ನರೇಂದ್ರ ಮೋದಿ, ಪಿ. ರಾಜೀವ್ ಪರ ಪ್ರಚಾರ ನಡೆಸಿದ್ದರೂ ಹೀನಾಯವಾಗಿ ರಾಜೀವ್ ಸೋತಿದ್ದಾರೆ.
ಇದನ್ನೂ ಓದಿ: 'ಎಲ್ಲಿ ಶ್ರಮವಿದೆಯೋ ಅಲ್ಲಿ ಪ್ರತಿಫಲ..': ನೊಣವಿನಕೆರೆ ಅಜ್ಜಯ್ಯನ ದರ್ಶನಕ್ಕೆ ತೆರಳಿದ ಡಿಕೆಶಿ