ಬೆಂಗಳೂರು: ಬಿಡಿಎ ಅಧ್ಯಕ್ಷರಾಗಿ ಎಸ್.ಆರ್.ವಿಶ್ವನಾಥ್ ಇಂದು ಅಧಿಕಾರ ಸ್ವೀಕರಿಸಿದರು. ಕೂಡಲೇ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.
ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಇದು ಬಹಳ ಜವಾಬ್ದಾರಿ ಇರುವಂತಹ ಸಂಸ್ಥೆ. ಬಿಡಿಎನಲ್ಲಿ ಪ್ರಗತಿಗಿಂತಲೂ ಭ್ರಷ್ಟಾಚಾರ ಜಾಸ್ತಿ ಇದೆ. ಹೀಗಾಗಿ ಭ್ರಷ್ಟಾಚಾರ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಭ್ರಷ್ಟಾಚಾರದಲ್ಲಿ ಯಾವುದೇ ಅಧಿಕಾರಿಗಳು ಇದ್ದರೂ ಸುಮ್ಮನೆ ಬಿಡೋದಿಲ್ಲ. ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದರು.
ನಾಳೆ ಅಧಿಕಾರಿಗಳ ಸಭೆ ನಡೆಸಲಿದ್ದೇನೆ. ಎರಡು ಮೂರು ಬಡಾವಣೆಗಳು ಅಭಿವೃದ್ಧಿಯಾಗಿಲ್ಲ, ನಿವೇಶನ ಸರಿಯಾಗಿ ಹಂಚಿಕೆಯಾಗಿಲ್ಲ ಎಂಬ ಬಗ್ಗೆ ದೂರು ಇದೆ. ಪಿಆರ್ಆರ್ ರಿಂಗ್ ರಸ್ತೆ ಕಾಮಗಾರಿಗೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ನಾನು ಕಚೇರಿಯಲ್ಲಿದ್ದು ಕೆಲಸ ಮಾಡುವವನಲ್ಲ. ಓಡಾಡಿ ಕೆಲಸ ಮಾಡಿಸುವವನು. ಬಡಾವಣೆಗಳಲ್ಲಿ ಸುತ್ತಾಡಿ ಕೆಲಸ ಮಾಡಲಾಗುವುದು ಎಂದರು.
ಒಬ್ಬ ವ್ಯಕ್ತಿಗೆ ಒಂದು ಸ್ಥಾನ ಇರಬೇಕು. ಇಂದು ಸಂಜೆ ನಾಲ್ಕು ಗಂಟೆಗೆ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಚರ್ಚಿಸಿ, ಸಿಎಂ ಸೂಚನೆಯಂತೆ ನಡೆಯುತ್ತೇನೆ ಎಂದರು.
ಇದನ್ನೂ ಓದಿ: ಮುಂಬೈ ದಾಳಿ ನೆನೆದು ಭಾವನಾತ್ಮಕ ಟ್ವೀಟ್ ಮಾಡಿದ ರತನ್ ಟಾಟಾ!