ಬೆಂಗಳೂರು: ದೇಶ ನಿರ್ಮಾಣದ ಬೆನ್ನೆಲುಬು ನೆಹರು. ಇಂಥವರ ಹೆಸರನ್ನು ಕೆಡಿಸುವ, ವರ್ಚಸ್ಸು ಕುಗ್ಗಿಸುವ ಕಾರ್ಯ ಆಗುತ್ತಿರುವುದು ವಿಪರ್ಯಾಸ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆಹರು ಕೊಡುಗೆಯನ್ನು ಮರೆಯಲಾಗದು, ಮರೆಯಬಾರದು. ಇವರ ಹೆಸರು, ಕೊಡುಗೆ ಕುಗ್ಗಿಸುವ ಕಾರ್ಯ ಬಿಜೆಪಿ ಹಾಗೂ ಸಂಘ ಪರಿವಾರದವರಿಂದ ಆಗುತ್ತಿದೆ. ನೆಹರು ಅವರಿಂದ ದೇಶಕ್ಕೆ ತೊಂದರೆ ಆಯಿತು ಎನ್ನುವ ಭಾವನೆ ಬಿಂಬಿಸುವ ಕಾರ್ಯ ದೇಶದಲ್ಲಿ ಆಗುತ್ತಿದೆ. ಇದನ್ನು ನಾವು ಖಂಡಿಸಲೇಬೇಕು. ನೆಹರು ಕೊಡುಗೆಯನ್ನು ಜನರಿಗೆ ತಲುಪಿಸುವ ಮೂಲಕ ಇಂಥವರ ಬಾಯಿ ಮುಚ್ಚಿಸಬೇಕು. ಇಲ್ಲವಾದರೆ, ಯುವ ಪೀಳಿಗೆಗೆ ತಪ್ಪು ಸಂದೇಶ ರವಾನಿಸಲಾಗುತ್ತಿದೆ ಎಂದರು.
ಸ್ವತಂತ್ರ ಬಂದಾಗ ದೇಶದ ಭವಿಷ್ಯ ಏನಾಗಬಹುದು ಎನ್ನುವ ಆತಂಕ ಇತ್ತು. ಎಲ್ಲರೂ ಒಂದಾಗಿರಲು ಸಾಧ್ಯವಾ ಅನ್ನುವ ವಾತಾವರಣ ಇತ್ತು. ದೇಶ 70 ವರ್ಷದ ನಂತರವೂ ಒಂದಾಗಿರುವುದಕ್ಕೆ ಭದ್ರ ಬುನಾದಿ ಹಾಕಿದವರೇ ನೆಹರು. ಅವರನ್ನೇ ದೂಶಿಸುವ ಸಂದರ್ಭ ನಿರ್ಮಾಣವಾಗಿರುವುದು ವಿಪರ್ಯಾಸ. ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಬ್ ಭಾಯ್ ಪಟೇಲ್ ಕೂಡ ನೆಹರು ಅವರನ್ನು ಹೊಗಳಿದ್ದರು. ಹಲವರು ಸಹಕಾರ ನೀಡಿದ್ದರು. ಇಂದಿನ ಪ್ರತಿ ಸಾಧನೆಗೆ ಅಡಿಗಲ್ಲು ಹಾಕಿದವರು ನೆಹರು. ತಪ್ಪು ಮಾಡದ ವ್ಯಕ್ತಿ ಇಲ್ಲ. ಸಣ್ಣ ಸಣ್ಣ ಕಾರಣ ಮುಂದಿಟ್ಟು ತೇಜೋವಧೆ ಮಾಡುತ್ತಿದ್ದಾರೆ.
ಇಂದು ನೆಹರು ಅವರನ್ನು ತೆಗಳುತ್ತಿರುವವರು ಅಂದು ಎಲ್ಲಿದ್ದರು. ಇಂದು ಎಲ್ಲರ ಮುಂದೆ ದೊಡ್ಡ ಸವಾಲಿದೆ. ದೇಶದ ಚುಕ್ಕಾಣಿ ಹಿಡಿದವರು ದೇಶದ ಬೆಳವಣಿಗೆ ದಿಕ್ಕನ್ನೇ ಬದಲಿಸುವ ಕಾರ್ಯ ಮಾಡುತ್ತಿದ್ದಾರೆ. ಮುಂದೆ ದೇಶ ಏನಾಗಬಹುದು ಎನ್ನುವ ಭಯ, ಆತಂಕ ಇದೆ. ನಾವು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಜನರ ಭಯ, ಆತಂಕ ದೂರ ಮಾಡಬೇಕು. ಉದಾರ, ವಿಶಾಲ ಹೃದಯ ಉಳ್ಳ ನಾಯಕರು, 17 ವರ್ಷ ಪ್ರಧಾನಿಯಾಗಿ ದೇಶ ಗಟ್ಟಿಯಾಗಿ ಕಟ್ಟಿದರು. ಮೌಲ್ಯ, ಪ್ರೇಮ ದೇಶದಲ್ಲಿ ಉಳಿಸಿ ಹೋಗಿದ್ದಾರೆ. ಅವರನ್ನು ಗೌರವಿಸುವ ಕಾರ್ಯ ಆಗಲಿ. ದೇಶಪ್ರೇಮ, ದೇಶ ಕಟ್ಟುವ ಕಾರ್ಯದಲ್ಲಿ ಅವರ ಸೇವೆ ಯಾವತ್ತೂ ಮರೆಯುವಂತದ್ದಲ್ಲ. ಬ್ರಾತೃತ್ವದ ಭಾವನೆ ನಿರ್ಮಿಸುವಂತ ವ್ಯಕ್ತಿತ್ವ ಅವರದ್ದು ಎಂದು ವಿವರಿಸಿದರು.