ಬೆಂಗಳೂರು: ನಿನ್ನೆ ತಡರಾತ್ರಿ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ಡಿಕೆಶಿ ದಾಖಲಾಗಿದ್ದು, ವೈದ್ಯರ ಸೂಚನೆ ಧಿಕ್ಕರಿಸಿ, ಹೆಚ್ಚು ಓಡಾಡಿದ್ದೇ ಇದಕ್ಕೆ ಕಾರಣ ಎನ್ನುವ ಅನುಮಾನ ಈಗ ದಟ್ಟವಾಗಿದೆ. ಕಳೆದ ನ.1ರಂದು ರಾತ್ರಿ ತೀವ್ರ ಬೆನ್ನುನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಡಿ.ಕೆ. ಶಿವಕುಮಾರ್ಗೆ ನಂತರ ಅಧಿಕ ರಕ್ತದೊತ್ತಡ ಹಾಗೂ ತೀವ್ರ ಸಕ್ಕರೆ ಕಾಯಿಲೆ ಉಲ್ಬಣಗೊಂಡಿತ್ತು. ಅಲ್ಲದೇ ಜ್ವರದಿಂದ ಕೂಡ ಅವರು ಬಳಲುತ್ತಿದ್ದರು. ಆದರೆ ಎರಡು ದಿನದ ಆಸ್ಪತ್ರೆ ವಾಸದ ನಂತರ ಬಿಡುಗಡೆ ಹೊಂದಿ ಮನೆ ಸೇರಿದ್ದರು.
ಆಸ್ಪತ್ರೆಯಿಂದ ತೆರಳುವ ಸಂದರ್ಭ ವೈದ್ಯರು ಡಿಕೆಶಿಗೆ ವಿಶ್ರಾಂತಿ ಮಾಡಲು ಸೂಚಿಸಿದ್ದರು. ಆದರೆ ನ.3 ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಡಿಕೆಶಿ ನಂತರ ನಿರಂತರವಾಗಿ ಮುಖಂಡರ ಭೇಟಿ, ಆರೋಗ್ಯ ವಿಚಾರಣೆ, ಸುತ್ತಾಟ ಮಾಡಿದ್ದರು. ನ.7 ಮತ್ತು 8 ರಂದು ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ವಿವಿಧ ದೇವಾಲಯ, ಮಠಗಳಿಗೆ ಭೇಟಿ ಕೊಟ್ಟಿದ್ದರು. ಇದಾದ ಬಳಿಕವೂ ನಿನ್ನೆ ಸಂಜೆಯವರೆಗೂ ಕಾಂಗ್ರೆಸ್ ಪಕ್ಷದ ವಿವಿಧ ಸಭೆ, ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಈ ಎಲ್ಲಾ ಸಂದರ್ಭ ಆರೋಗ್ಯ ಕಾಳಜಿ ನಿರ್ಲಕ್ಷಿಸಿದ್ದೇ ಇವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.
ಸದ್ಯ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವ ಮಾಹಿತಿ ಇದೆ. ಡಿಕೆಶಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಗುಣಮುಖರಾಗಲಿದ್ದಾರೆ ಎನ್ನುವ ವಿಶ್ವಾಸ ವೈದ್ಯರದ್ದಾಗಿದೆ. ಬೆಳಗ್ಗೆ ಪುತ್ರಿ ಐಶ್ವರ್ಯಾ ಆಸ್ಪತ್ರೆಗೆ ಭೇಟಿ ನೀಡಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಕುಟುಂಬ ಸದಸ್ಯರು ಇನ್ನಷ್ಟು ಮಂದಿ ಆಗಮಿಸುವ ಸಾಧ್ಯತೆ ಇದೆ. ಹೊರಗಿನವರಿಗೆ ಭೇಟಿಗೆ ಅವಕಾಶ ಇಲ್ಲವಾಗಿದೆ. ಇದರಿಂದ ವಿವಿಧ ರಾಜಕೀಯ ನಾಯಕರು, ಅಭಿಮಾನಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇಲ್ಲವಾಗಿದೆ. ಇನ್ನೂ ನಾಲ್ಕೈದು ದಿನ ಅವರು ಆಸ್ಪತ್ರೆಯಲ್ಲೇ ಇರಬೇಕಾಗಿ ಬರಲಿದೆ ಎಂದು ವೈದ್ಯರು ತಿಳಿಸಿರುವ ಹಿನ್ನೆಲೆ ಮುಂಬರುವ ಉಪಚುನಾವಣೆಯಲ್ಲಿ ಇವರು ಪ್ರಚಾರ ಇಲ್ಲವೇ ಇತರೆ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.