ಬೆಂಗಳೂರು: ಪ್ರಧಾನಿಯಾದವರು ಜನರ ಸಮಸ್ಯೆ ಆಲಿಸಲು ದೇಶ ಸುತ್ತಬೇಕೇ ವಿನಃ ಭಾಷಣ ಮಾಡುವುದಕ್ಕಲ್ಲ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು 11 ತಿಂಗಳ ಅಧಿಕಾರಾವಧಿಯಲ್ಲಿ ಜನರ ಸಮಸ್ಯೆ ಆಲಿಸುವುದಕ್ಕಾಗಿ ದೇಶದ ವಿವಿಧ ಭಾಗಗಳನ್ನು ಸುತ್ತಿದ್ದರು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಂ.ಆರ್ ಶ್ರೀನಿವಾಸಮೂರ್ತಿ ಹೇಳಿದರು.
ಪಾರದರ್ಶಕ ಮಾಧ್ಯಮ ಸಂಸ್ಥೆ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿರುವ ಆಂಗ್ಲ ಭಾಷೆ 'ಫರ್ರೋಸ್ ಇನ್ ದಿ ಫೀಲ್ಡ್' ಕೃತಿಯನ್ನು ರೋಸಿ ಡಿಸೋಜಾ ಅವರು ಕನ್ನಡಕ್ಕೆ ಅನುವಾದಿಸಿರುವ 'ನೇಗಿಲ ಗೆರೆಗಳು' ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಭಾಷಣ ಮಾಡಲೆಂದೇ ಪ್ರವಾಸ ಮಾಡುವ ಪ್ರಧಾನಿಗಳು ಬೇರೆ, ಜನರ ಸಮಸ್ಯೆ ಆಲಿಸಿ ಪರಿಹಾರ ನೀಡಲು ಪ್ರವಾಸ ಮಾಡುವ ಪ್ರಧಾನಿಗಳೇ ಬೇರೆ. ದೇವೇಗೌಡರು ಪ್ರಧಾನಿಯಾದ ಒಂದೇ ವಾರಕ್ಕೆ ಜಮ್ಮು-ಕಾಶ್ಮೀರ ಪ್ರವಾಸ ಮಾಡಿ ಅಲ್ಲಿನ ಜನರ ಸಮಸ್ಯೆ ಆಲಿಸಿದ್ದರು. 11 ತಿಂಗಳ ಅವಧಿಯಲ್ಲಿ ನಾಲ್ಕು ಭಾರಿ ಕಾಶ್ಮೀರಕ್ಕೆ ಭೇಟಿ ನೀಡಿದ ಏಕೈಕ ಪ್ರಧಾನಿ ಇವರು ಎಂದು ಶ್ಲಾಘಿಸಿದರು.
ದೇವೇಗೌಡರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಾಗ ಪ್ರತಿಪಕ್ಷಗಳು ನಾವು ನಿಮ್ಮ ರಾಜಕೀಯ ವಿರೋಧಿಗಳೇ ಹೊರತು, ನಿಮ್ಮ ಶತ್ರುಗಳಲ್ಲ ಎಂದು ಹೇಳಿದ್ದರು. ಇಂದಿನ ರಾಜಕಾರಣದಲ್ಲಿ ವಿರೋಧಿಗಳನ್ನು ಶತ್ರುಗಳನ್ನಾಗಿ ನೋಡಲಾಗುತ್ತಿದೆ. ಹೀಗಾದಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. 'ನೇಗಿಲ ಗೆರೆಗಳು' ಪುಸ್ತಕ ಓದಿದಲ್ಲಿ ಪ್ರಜಾಪ್ರಭುತ್ವದ ಒಂದು ಮುಖ ಪರಿಚಯವಾಗುತ್ತದೆ. ಜತೆಗೆ ಪ್ರಜಾಪ್ರಭುತ್ವ ನಡೆಯಬೇಕಾದ ರೀತಿಯಲ್ಲಿ ಸಾಗುತ್ತಿದೆಯೇ ಅಥವಾ ಬೇರೆ ರೀತಿ ನಡೆಯುತ್ತಿದೆಯೇ ಎಂದು ನಾವು ಆಲೋಚಿಸಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಡಾ. ಎಸ್.ಎಸ್. ಮೀನಾಕ್ಷಿ ಸುಂದರಂ ಮಾತನಾಡಿ " ದೇವೇಗೌಡರು ಕಾನೂನು ಮತ್ತು ನೀರಾವರಿ ಇಲಾಖೆಗ ಕಾರ್ಯದರ್ಶಿಗಳಿಗಿಂತಲೂ ಆಳವಾದ ಜ್ಞಾನ ಹೊಂದಿದ್ದರು. ಇಷ್ಟಾದರೂ ಯಾರ ಬಗ್ಗೆಯೂ ವೈಯಕ್ತಿಕ ದ್ವೇಷ ಹೊಂದಿರಲಿಲ್ಲ" ಎಂದರು.
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಂಗ್ ಮಾತನಾಡಿ "ದೇವೇಗೌಡರ ಜೀವನ ಯಶೋಗಾಥೆ ಯಾವ ಪೌರಾಣಿಕ ಕಥೆಗಳಿಗೂ ಕಡಿಮೆ ಇಲ್ಲ. ಹಿಂದಿ ಮತ್ತು ಪಂಜಾಭಿ ಭಾಷೆಗೆ ಅನುವಾದವಾಗಬೇಕು. ಜತೆಗೆ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವಂತಾಗಬೇಕು" ಎಂದು ಅಭಿಲಾಷೆ ವ್ಯಕ್ತಪಡಿಸಿದರು.
ದೇವೇಗೌಡರು ಅಧಿಕಾರಕ್ಕಾಗಿ ಸ್ವಾಭಿಮಾನ ಮಾರಿಕೊಂಡವರಲ್ಲ. ನೈತಿಕ ಮೌಲ್ಯ ಕಾಪಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಡೀ ದೇಶದ ಅನೇಕ ಪ್ರಧಾನಿಗಳ ಬಗ್ಗೆ ಹಾಗೂ ಅವರು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಋಣಾತ್ಮಕ ಮಾತುಗಳನ್ನು ಆಡುತ್ತಾರೆ. ಆದರೆ, ದೇವೇಗೌಡರ ಬಗ್ಗೆ ಈವರೆಗೂ ಒಬ್ಬರೂ ಋಣಾತ್ಮಕವಾಗಿ ಮಾತನಾಡಿರುವುದನ್ನು ನೋಡಿಲ್ಲ. ಇವರ ಮೇಲಿನ ಪ್ರೀತಿಯಿಂದ ಪಂಜಾಬ್‌ನಲ್ಲಿ ಭತ್ತದ ತಳಿಯೊಂದಕ್ಕೆ ದೇವೇಗೌಡರ ಹೆಸರಿಡಲಾಗಿದೆ ಎಂದರು.
ಜಯದೇವ ಹೃದ್ರೋಗ ಸಂಸ್ಥೆಯ ಡಾ. ಸಿ.ಎನ್ ಮಂಜುನಾಥ್ ಮಾತನಾಡಿ, ದೇವೇಗೌಡರು ಭಾರತದ 11ನೇ ಪ್ರಧಾನ ಮಂತ್ರಿಯಾಗಿ 11 ತಿಂಗಳ ಅಧಿಕಾರ ನಡೆಸಿದರು. ಈ ಅವಧಿಯಲ್ಲೇ 11 ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ದೇವೇಗೌಡರ ಉತ್ತಮವಾದ ಕೆಲಸ ಮತ್ತು ಸಾಧನೆಗಳ ಬಗ್ಗೆ ಉತ್ತರ ಭಾರತೀಯರಿಗೆ ಚೆನ್ನಾಗಿ ಅರಿವಿದೆ. ಹಲವು ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿರುವವರ ಹೆಸರು ಗೊತ್ತಿರುವುದಿಲ್ಲ. ಕೇವಲ ಉದ್ಘಾಟಕರನ್ನು ಮಾತ್ರ ನೆನಪು ಮಾಡಿಕೊಳ್ಳುತ್ತೇವೆ. ದೇವೇಗೌಡರು ಎಂದಿಗೂ ಸರ್ಕಾರಿ ಆದೇಶ ಹಾಗೂ ಸಹಿಯನ್ನು ಮಾರಿಕೊಂಡವರಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಪತ್ನಿ ಚೆನ್ನಮ್ಮ ದೇವೇಗೌಡ, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು, ಕೃತಿಯ ಅನುವಾದಕ ರೋಸಿ ಡಿಸೋಜಾ, ಮಾಜಿ ಸಚಿವ ರೋಷನ್ ಬೇಗ್, ಜೆಡಿಯು ಮುಖಂಡ ಎಂ.ಪಿ. ನಾಡಗೌಡ, ರಾಜ್ಯ ಸಭಾ ಸದಸ್ಯ ಲೆಹರ್ ಸಿಂಗ್, ಪಾರದರ್ಶಕ ಮಾಧ್ಯಮ ಸಂಸ್ಥೆಯ ಜಿ.ಮಹಾಂತೇಶ, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲ ಯಾವ ಪಕ್ಷಕ್ಕೆ ಎಂದು ತಿಳಿಸಿದ ದೇವೇಗೌಡರು