ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ರಾಜ್ಯದ ಧ್ರುವ ಅಡ್ವಾಣಿ 5ನೇ ರ್ಯಾಂಕ್ ಪಡೆದಿದ್ದು, ವಿಕಲಚೇತನ ಮಹಿಳಾ ಕೋಟಾದಲ್ಲಿ ರಾಜ್ಯದ ಲಾವಣ್ಯ ಗುಪ್ತಾ ಪ್ರಥಮ ಸ್ಥಾನ ಗಳಿಸಿದ್ದಾರೆ.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದ್ದು, ಟಾಪ್ 20 ರಲ್ಲಿ ರಾಜ್ಯದಿಂದ ಕೇವಲ ಓರ್ವ ವಿದ್ಯಾರ್ಥಿ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಜಿ. ಆರ್ ಇಂಟರ್ ನ್ಯಾಷನಲ್ ಸ್ಕೂಲ್ನ ಧ್ರುವ್ ಅಡ್ವಾಣಿ 5ನೇ ರ್ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಧ್ರುವ್ ಅಡ್ವಾಣಿ 715 ಅಂಕಗಳೊಂದಿಗೆ ಶೇ.99.99 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.
ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಭೈರೇಶ್ ಎಸ್. ಎಚ್. 48ನೇ ರ್ಯಾಂಕ್ ಪಡೆದ ಸಾಧನೆ ಮಾಡಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯ ಹರೀಶ್ ಎಸ್. ಬಿ. ಹಾಗೂ ರಾಧಮ್ಮ ಕೆ. ದಂಪತಿ ಪುತ್ರರಾದ ಭೈರೇಶ್ ಮಂಗಳೂರು ಎಕ್ಸ್‌ಪರ್ಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ನೀಟ್ ಪರೀಕ್ಷೆಯಲ್ಲಿ 720 ಕ್ಕೆ 710 ಅಂಕಗಳನ್ನು ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ 48ನೇ ರ್ಯಾಂಕ್ ಪಡೆದು ರಾಜ್ಯಮಟ್ಟದಲ್ಲಿ ಎರಡನೇ ಸ್ಥಾನಗಳಿಸಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಇನ್ನು ವಿಕಲಚೇತನ ಮಹಿಳಾ ಕೋಟಾದಲ್ಲಿ ಲಾವಣ್ಯ ಗುಪ್ತಾ 686 (ಶೇ.99.94) ಅಂಕ ಗಳಿಸಿ ದೇಶಕ್ಕೆ ಮೊದಲ ಟಾಪರ್ ಎನಿಸಿದ್ದಾರೆ.
ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಧ್ರುವ ಅಡ್ವಾಣಿ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವೈದ್ಯಕೀಯ ಪದವಿಗೆ ಸೇರುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ರಾಜ್ಯದ ಟಾಪರ್ಗೆ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದು, ಎಐಐಎಂಎಸ್ನಲ್ಲಿ ಪದವಿ ಪ್ರವೇಶಕ್ಕೆ ಅವಕಾಶ ಸಿಗಲೆಂದು ಶುಭಾಶಯ ಕೋರಿದ್ದಾರೆ. ಇನ್ನು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದ ಭೈರೇಶ್ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ಪುತ್ರನಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.
ದೇಶಾದ್ಯಂತ ಈ ಬಾರಿ 20,87,462 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 20,38,596 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 4,90,374 ವಿದ್ಯಾರ್ಥಿಗಳು ಹಾಗೂ 6,55,599 ವಿದ್ಯಾರ್ಥಿನಿಯರು ಸೇರಿ 11,45,976 ಮಂದಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ಇದನ್ನೂ ಓದಿ: NEET-UG Results: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ: ಇಬ್ಬರು ಟಾಪರ್ಸ್‌ಗೆ 99.99% ಅಂಕ