ಬೆಂಗಳೂರು: ಚಿತ್ರನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಪಾರ್ಥಿವ ಶರೀರ ನೋಡಲು ಅಭಿಮಾನಿಗಳು ಆಗಮಿಸಿದ್ದರು. ಅಷ್ಟೇ ಅಲ್ಲದೆ, ಸರ್ಜಾ ಅಭಿಮಾನಿಗಳು ಕೆಲವರು ಮಾಸ್ಕ್ ಧರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳ ವಿರುದ್ಧ ಜಯನಗರ, ತಲಘಟ್ಟಪುರ, ಕುಮಾರಸ್ವಾಮಿ ಲೇಔಟ್ ಹಾಗೂ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಎನ್ಡಿಎಂಎ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ.
ಚಿತ್ರನಟ ಚಿರಂಜೀವಿ ಸರ್ಜಾ ಅನೇಕ ಅಭಿಮಾನಿಗಳನ್ನು ಹೊಂದಿರುವ ಕಾರಣದಿಂದ ನಗರ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೆಲ ನಿಯಮಗಳನ್ನು ವಿಧಿಸಿ ಅನುಮತಿ ನೀಡಿದ್ದರು. ಆದರೆ ಪೊಲೀಸರು ವಿಧಿಸಿದ ನಿಯಮವನ್ನು ಸರ್ಜಾ ಅಭಿಮಾನಿಗಳು ಉಲ್ಲಂಘಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 59 ಪ್ರಕರಣ ದಾಖಲಾಗಿವೆ. ಅಷ್ಟೇ ಅಲ್ಲದೆ, ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳ ವಿರುದ್ಧ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ವ್ಯಕ್ತಿಯೊಬ್ಬರು ಮುಂದಾಗಿದ್ದಾರೆ. ಹೀಗಾಗಿ ಒಂದು ವೇಳೆ ನ್ಯಾಯಾಲಯಕ್ಕೆ ಸಾರ್ವಜನಿಕ ಕ್ರಮ ಅರ್ಜಿ ಸಲ್ಲಿಕೆ ಮಾಡಿದರೆ ಕೋರ್ಟ್ ಆದೇಶದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ದಕ್ಷಿಣ ವಿಭಾಗದ ಪೊಲೀಸರು ನಿರ್ಧರಿಸಿದ್ದಾರೆ.
ನಟ ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ಹೃದಯಾಘತದಿಂದ ಮೃತಪಟ್ಟಿದ್ದರು. ಜೂನ್ 8ರಂದು ನೆಲಗುಳಿಯಲ್ಲಿರುವ ಸರ್ಜಾ ಫಾರ್ಮ್ಹೌಸ್ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಈ ವೇಳೆ ಸಾವಿರಾರು ಅಭಿಮಾನಿಗಳು ಅಲ್ಲಿ ಸೇರಿದ್ದರು.