ಬೆಂಗಳೂರು: ರಾಷ್ಟ್ರೀಯ ಕೀಲು ಮತ್ತು ಮೂಳೆ ದಿನದ ಅಂಗವಾಗಿ ಇಂದು ರಾಜಾಜಿ ನಗರದ ಇಎಸ್ಐ ಮಾದರಿ ಆಸ್ಪತ್ರೆಯ ಸಭಾಂಗಣದಲ್ಲಿ ಎರಡು ದಿನದ ಕಾರ್ಯಾಗಾರಕ್ಕೆ ಚಾಲನೆ ದೊರೆಯಿತು.
2012ರರಿಂದ ಭಾರತದಾದ್ಯಂತ ಇಂಡಿಯನ್ ಅರ್ಥೊಪೆಡಿಕ್ ಅಸೋಸಿಯೇಷನ್ ಪ್ರತಿ ವರ್ಷ ಆಗಸ್ಟ್ 4ರಂದು ರಾಷ್ಟ್ರೀಯ ಕೀಲು ಮತ್ತು ಮೂಳೆ ದಿನವನ್ನು ಆಚರಿಸುತ್ತಾ ಬಂದಿದೆ. ಅಲ್ಲದೆ, ಪ್ರತಿ ವರ್ಷ ರಾಷ್ಟ್ರೀಯ ಕೀಲು ಮತ್ತು ಮೂಳೆ ದಿನದ ಅಂಗವಾಗಿ ಭಾರತದಾದ್ಯಂತ ವಿವಿಧ ಶಿಕ್ಷಣ ಕಾರ್ಯಕ್ರಮಗಳು, ಉಚಿತ ಅರೋಗ್ಯ ಶಿಬಿರಗಳು ಮತ್ತು ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಕೊಂಡು ಬಂದಿದೆ.
ಈ ಬಾರಿ ಮನುಷ್ಯನು ಮೂಳೆಗಳನ್ನು ವಯಸ್ಸಾದ ಮೇಲೂ ಹೇಗೆ ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು ಹಾಗೂ ವಯಸ್ಸಾದವರ ಮೂಳೆಗಳು ಮುರಿದರೆ ಯಾವ ರೀತಿಯ ಚಿಕಿತ್ಸೆ ಅವಶ್ಯವಿದೆಯೆಂಬ ವಿಷಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎರಡು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಆರ್ಥೊಪೆಡಿಕ್ ಸೊಸೈಟಿ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಮೂಳೆ ವೈದ್ಯರು ಹಾಜರಿದ್ದರು. ಅಲ್ಲದೆ, ಮುಂಬೈನಿಂದ ಹಿರಿಯ ಅಧ್ಯಾಪಕರು ಬಂದಿದ್ದರು. ಇನ್ನು ಈ ಕಾರ್ಯಾಗಾರದಲ್ಲಿ ಬಡವರಿಗೆ ಉಚಿತವಾದ ಚಿಕಿತ್ಸೆ ಇದ್ದು, ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರು ಎರಡು ದಿನದ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.