ಬೆಂಗಳೂರು: ಮೋದಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದರೆ, ಅದು ಅತ್ಯಂತ ಸಂತೋಷದ ವಿಚಾರವಾಗಿದೆ. ಅದಕ್ಕಿಂತ ದೊಡ್ಡ ಸಂತೋಷ ಬೇರೆ ಏನಿದೆ?. ನಾನೂ ಕೂಡಾ ಕಾಯುತ್ತಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಅವರು, ಐದು ಕ್ಷೇತ್ರಗಳ ಬಿಜೆಪಿ ಟಿಕೆಟ್ ಬಾಕಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಜ್ಯ ಚುನಾವಣಾ ಸಮಿತಿ ಮಾಡಿರುವ ಶಿಫಾರಸು ಆಧರಿಸಿ ಹೈಕಮಾಂಡ್ ಚರ್ಚೆ ಮಾಡುತ್ತಿದೆ. ಅತೀ ಶೀಘ್ರದಲ್ಲೇ ಐದು ಕ್ಷೇತ್ರಗಳ ಹೆಸರು ಪ್ರಕಟವಾಗಲಿದೆ ಎಂದು ತಿಳಿಸಿದರು.
ಹಾಸನ ಜನ ತಕ್ಕ ಪಾಠ ಕಲಿಸಬೇಕು:
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕೆಳಮಟ್ಟದ ಮಾತಾಡೋದು ಅವರಿಗೆ ಎಷ್ಟು ಶೋಭೆ ತರುತ್ತದೆ? ಎಂದು ಪ್ರಶ್ನಿಸಿರುವ ಯಡಿಯೂರಪ್ಪ, ಸೊಕ್ಕು, ಧಿಮಾಕಿನ ಮಾತುಗಳು ಮುಂದುವರಿಯುತ್ತಿದೆ. ಹಾಸನ ಜನ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕಿಡಿಕಾರಿದರು.
ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಸುಮಲತಾ ಗೆಲುವು ಖಚಿತ. ನಮ್ಮ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡುತ್ತಾರೆ.ಇದನ್ನೆಲ್ಲಾ ನೋಡಿ ಜೆಡಿಎಸ್ ನಿಂದ ಗೂಂಡಾ ವರ್ತನೆ ನಡೆಯುತ್ತಿದೆ. ಸುಮಲತಾ ಪರ ಪ್ರಚಾರಕ್ಕೆ ನಾನೂ ಹೋಗ್ತೀನಿ, ನಮ್ಮ ನಾಯಕರನ್ನೂ ಕರೆದುಕೊಂಡು ಹೋಗ್ತೀನಿ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ವೇಳೆ ಹಣ ವಸೂಲಿ:
ಓಲಾ ಕ್ಯಾಬ್ ಯಾಕೆ ಬಂದ್ ಮಾಡಿಸಿದ್ರು ಅನ್ನೋದು ಗೊತ್ತಿಲ್ಲ. ಅದಾದ ಎರಡನೇ ದಿನಕ್ಕೆ ಮತ್ತೆ ಪರ್ಮಿಶನ್ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಹಣ ವಸೂಲಿಗೆ ಈ ರೀತಿ ಮಾಡಿದ್ರು ಅನ್ನೋದು ಜನಸಾಮಾನ್ಯರಿಗೆ ಅರ್ಥ ಆಗುತ್ತದೆ. ಎಲ್ಲದರಲ್ಲೂ ಕಮಿಶನ್ ಹೊಡೆಯುವ ಸರ್ಕಾರ ಇದು ಎಂದು ಯಡಿಯೂರಪ್ಪ ಆರೋಪಿಸಿದರು.