ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಬಣ್ಣದ ಬಹು ನಿರೀಕ್ಷಿತ ಕೆ ಆರ್ ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳು ಸೋಮವಾರದಿಂದ ಸಂಚಾರ ಆರಂಭಿಸಲಿವೆ ಎಂದು ನಮ್ಮ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಸರ್ಕಾರದ ಯಾವುದೇ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳಿಗೆ ಕಾಯದೇ ನಾಳೆಯಿಂದ ಸೇವೆಗಳನ್ನು ಆರಂಭಿಸುವಂತೆ ಬಿ.ಎಂ.ಆರ್.ಸಿ.ಎಲ್ ಗೆ ಸೂಚನೆ ನೀಡಿದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಕೆ.ಆರ್.ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗವನ್ನು ಪ್ರಾರಂಭಿಸಲು ಸರ್ಕಾರ ನಿರಂತರ ವಿಳಂಬ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನರು ಬೆಂಗಳೂರು ಮೆಟ್ರೋ ಬಳಸುತ್ತಾರೆ. ಬೈಯಪ್ಪನಹಳ್ಳಿ-ಕೆ ಆರ್. ಪುರ ಮೆಟ್ರೋ ಮಾರ್ಗವನ್ನು ತೆರೆದರೆ ಸುಮಾರು 50-60 ಪ್ರತಿಶತದಷ್ಟು ಜನರಿಗೆ ಅನುಕೂಲವಾಗಲಿದೆ ಎಂದಿದ್ದರು.
ಕೇಂದ್ರ ಸರ್ಕಾರ ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದ ಪೂರ್ವ-ಪಶ್ಚಿಮ ಕಾರಿಡಾರ್‌ನ ವಿಭಾಗಗಳಾದ ಬೈಯಪ್ಪನಹಳ್ಳಿ - ಕೆರ್ ಪುರ (2.1 ಕಿಮೀ) ಮತ್ತು ಚಲ್ಲಘಟ್ಟ - ಕೆಂಗೇರಿ (2.05 ಕಿಮೀ) ನಡುವೆ ಎರಡು ರೈಲ್ವೆೆ ಮಾರ್ಗಗಳಲ್ಲಿ ವಾಣಿಜ್ಯ ಸೇವೆ ಆರಂಭಿಸಿ, ಪ್ರಯಾಣಿಕರ ಕಾರ್ಯಾಚರಣೆ ಮಾಡುವಂತೆ ಮಂಜೂರು ಮಾಡಿದೆ.
ಸೆ. 25 ಮತ್ತು ಸೆ. 30 ಮೆಟ್ರೋ ರೈಲು ಸುರಕ್ಷತೆ ಆಯುಕ್ತರಿಂದ ಸುರಕ್ಷತಾ ಪರೀಕ್ಷೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ, ಮೇಲಿನ ಎರಡು ರೈಲ್ವೆ ಮಾರ್ಗಗಳನ್ನು ಔಪಚಾರಿಕವಾಗಿ ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸುವುದಕ್ಕೆೆ ಅನುಮತಿ ನೀಡಲಾಗಿದೆ.
ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ ಶಿವಕುಮಾರ್ ಸೆ.5 ರಂದು ಕೇಂದ್ರ ಸರ್ಕಾರಕ್ಕೆೆ ಪತ್ರವನ್ನು ಬರೆದು ಬೈಯಪ್ಪನಹಳ್ಳಿ - ಕೆ ಆರ್ ಪುರ ಮತ್ತು ಚಲ್ಲಘಟ್ಟ - ಕೆಂಗೇರಿ ಮಾರ್ಗಗಳನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಲು ದಿನಾಂಕ ನಿಗದಿ ಮಾಡುವಂತೆ ಕೇಳಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಗೆ ಮನವಿ ಮಾಡಿದ್ದರು.
ಆದರೆ ಬೆಂಗಳೂರು ನಗರದ ಪೂರ್ವದಿಂದ ಪಶ್ಚಿಮ ಭಾಗಕ್ಕೆ ತಡೆರಹಿತ ಸಂಪರ್ಕ ಪ್ರಯಾಣ ಸೇವೆ ಒದಗಿಸಲು ಬೆಂಗಳೂರಿನ ಪ್ರಯಾಣಿಕರ ದೃಷ್ಟಿಕೋನದಿಂದ ಪ್ರಮುಖವಾಗಿದೆ. ಆದ್ದರಿಂದ ಯಾವುದೇ ಔಪಚಾರಿಕ ಅಥವಾ ಅನೌಪಚಾರಿಕ ಅಧಿಕೃತ ಕಾರ್ಯವಿಲ್ಲದೆ 9 ಅಕ್ಟೋಬರ್ 2023 ರಂದು ತಕ್ಷಣವೇ ವಾಣಿಜ್ಯ ಸೇವೆಗೆ ಮುಕ್ತಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಮೆಟ್ರೋ ರೈಲು ಕಾರ್ಯಾಚರಣೆ ಸಮಯದಲ್ಲಿ ಬದಲಾವಣೆ: ನೇರಳೆ ಮಾರ್ಗದ ಕೆಂಗೇರಿ ಮತ್ತು ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರ ಮೆಟ್ರೋ ನಿಲ್ದಾಣಗಳ ನಡುವಿನ ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷೆ ನಡೆಸುವ ಸಲುವಾಗಿ ನಮ್ಮ ಮೆಟ್ರೋ ವಾಣಿಜ್ಯ ಸೇವೆಯ ಸಮಯದಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ಸಂಸ್ಥೆ ಪ್ರಕಟಣೆಯಲ್ಲಿ (ಆಗಸ್ಟ್ -15-2023) ತಿಳಿಸಿತ್ತು.
ಇದನ್ನೂ ಓದಿ: ಬೈಯಪ್ಪನಹಳ್ಳಿ- ಕೃಷ್ಣರಾಜಪುರ ನಿಲ್ದಾಣಗಳ ನಡುವೆ ಸಿಗ್ನಲಿಂಗ್ ಪರೀಕ್ಷೆ: ಮೆಟ್ರೋ ರೈಲು ಕಾರ್ಯಾಚರಣೆ ಸಮಯದಲ್ಲಿ ಬದಲಾವಣೆ