ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆಗೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೋಷಕರು ಯಾವುದೇ ರೀತಿಯ ಭಯ ಇಲ್ಲದೆ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದ್ದಾರೆ.
ನಾಳೆಯಿಂದ ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆ ಪ್ರಾರಂಭವಾಗುತ್ತದೆ. ಕೊರೊನಾ ಮಹಾಮಾರಿಯ ನಡುವೆಯೂ ನಿರಾತಂಕವಾಗಿ, ಯಶಸ್ವಿಯಾಗಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡಿದೆ. ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿರುವ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ಯಾವುದೇ ಆತಂಕವಿಲ್ಲದೆ ಬರೆಯಬೇಕು. ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷಾ ವ್ಯವಸ್ಥೆಯ ಪೂರ್ವ ತಯಾರಿ ಅವಲೋಕಿಸಿದ್ದಾರೆ. ಹಾಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ಕಟೀಲ್ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸುರೇಶ್ ಕುಮಾರ್ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದಾರೆ. ಆರೋಗ್ಯ ತಪಾಸಣೆ, ಮಾಸ್ಕ್ ವಿತರಣೆ, ಸಮರ್ಪಕ ಸ್ಯಾನಿಟೈಸೇಷನ್, ಅಗತ್ಯ ವೈದ್ಯಕೀಯ ಸೌಲಭ್ಯ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಸುರಕ್ಷಿತ ಪರೀಕ್ಷಾ ವ್ಯವಸ್ಥೆಗಾಗಿ ಶಿಕ್ಷಣ ಇಲಾಖೆಯೊಂದಿಗೆ ಆರೋಗ್ಯ, ಸಾರಿಗೆ ಮತ್ತು ಗೃಹ ಇಲಾಖೆ ಕೈಜೋಡಿಸಿವೆ. ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗಾಗಿ ಪೋಷಕರು ಭಯ ಬಿಟ್ಟು ಧೈರ್ಯ ಮತ್ತು ವಿಶ್ವಾಸದಿಂದ ಮಕ್ಕಳನ್ನು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.