ಬೆಂಗಳೂರು: ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ನವರು ಹೋರಾಟ ಮಾಡಿದ್ರೇನು ಬಂತು? ನಮ್ಮ ಸರ್ಕಾರ ಇರುವುದರಿಂದ ಎತ್ತುಗಳು ಉಳಿದಿವೆ. ಅದನ್ನು ಬಳಸಿಕೊಂಡು ಎತ್ತಿನಗಾಡಿಯಲ್ಲಿ ಹೋಗಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಿದ್ದರೆ, ಎತ್ತುಗಳು ಕಸಾಯಿಖಾನೆಗೆ ಹೋಗುತ್ತಿದ್ದವು ಎಂದು ಕಾಂಗ್ರೆಸ್ ಹೋರಾಟವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬೆಲೆ ಏರಿಕೆಯನ್ನು ವಿರೋಧಿಸಿ ಎತ್ತಿನ ಬಂಡಿಯಲ್ಲಿ ವಿಧಾನಸೌಧ ಚಲೋ ನಡೆಸಿದ್ದಾರೆ. ಆದರೆ ಬೆಲೆ ಏರಿಕೆ ಆಗಿದ್ದು ಹಿಂದಿನ ಯುಪಿಎ ಸರ್ಕಾರದಲ್ಲಿ, ಪ್ರತಿಭಟನೆ ಮಾಡಬೇಕಾಗಿದ್ದೂ ಯುಪಿಎ ಸರ್ಕಾರದ ವೇಳೆ. ಆದರೆ ಜನತೆಯ ದಾರಿ ತಪ್ಪಿಸಲು ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಪ್ರತಿಭಟನೆಗೆ ಎತ್ತುಗಳನ್ನು ಬಳಸಿಕೊಂಡಿದ್ದಾರೆ. ಇವರ ಸರ್ಕಾರವೇ ಇರುತ್ತಿದ್ದರೆ ಈ ಎತ್ತುಗಳು ಕಸಾಯಿಖಾನೆಯಲ್ಲಿ ಇರುತ್ತಿದ್ದವು, ನಮ್ಮ ಸರ್ಕಾರ ಇರುವ ಕಾರಣಕ್ಕೆ ಇವರ ಎತ್ತಿನ ಬಂಡಿಗೆ ಎತ್ತುಗಳು ಸಿಕ್ಕಿವೆ ಎಂದರು.
ಇದನ್ನೂ ಓದಿ:ತೈಲ, ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರ ಎತ್ತಿನಗಾಡಿ ಚಲೋ
ಅಕ್ಟೋಬರ್ನಲ್ಲಿ ರಾಜ್ಯ ಪ್ರವಾಸ:
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಜೊತೆ ರಾಜ್ಯ ಪ್ರವಾಸ ಮಾಡಲಾಗುತ್ತದೆ. ಮುಂದಿನ ತಿಂಗಳು ಜಿಲ್ಲಾ ಪ್ರವಾಸ ಮಾಡುತ್ತೇವೆ. ಈ ಬಗ್ಗೆ ಯಡಿಯೂರಪ್ಪ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಕಟೀಲ್ ಸ್ಪಷ್ಟಪಡಿಸಿದರು.
ಇದನ್ನೂ ಓದಿ: Video: ಪ್ರತಿಭಟನೆ ವೇಳೆ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು!
ಸಂತಾಪ:
ಆಸ್ಕರ್ ಫರ್ನಾಂಡಿಸ್ ರಾಷ್ಟ್ರೀಯ ನಾಯಕರಾಗಿ ಮೂಡಿ ಬಂದವರು. ಏಳು ಬಾರಿ ಸಂಸದರಾಗಿದ್ದರು.ರಾಜ್ಯಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅಜಾತ ಶತ್ರು, ಎಲ್ಲರ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ರಾಷ್ಟ್ರೀಯ ಹೆದ್ದಾರಿ ಸಚಿವರಾಗಿದ್ದರು. ವಾಜಪೇಯಿ ಸರ್ಕಾರದಲ್ಲಿ ಆಗಿರುವ ಹೆದ್ದಾರಿ ಬಗ್ಗೆ ಹೊಗಳಿದ್ದರು. ನಿತ್ಯ ಯೋಗ ಮಾಡುತ್ತಿದ್ದರು. ರಾಷ್ಟ್ರೀಯ ಪರಂಪರೆಯನ್ನು ಉಳಿಸಿದ್ದಾರೆ ಎಂದು ಸ್ಮರಿಸಿರುವ ಕಟೀಲ್ ಸಂತಾಪ ಸೂಚಿಸಿದರು.