ಬೆಂಗಳೂರು: ಗೋಪಾಲಯ್ಯ ಪರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಚಾರ ನಡೆಸಿದರು. ಇದೇ ವೇಳೆ ಬಿಜೆಪಿ ಚುನಾವಣಾ ಪ್ರಚಾರದ ವಾಹನಗಳಿಗೆ ಚಾಲನೆ ನೀಡಿದ ಅವರು, ಗೋಪಾಲಯ್ಯ ನಿವಾಸದಲ್ಲೇ ಬಿಜೆಪಿ ಯುವ ಮೋರ್ಚಾ ಘಟಕದ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ನಳಿನ್ ಕುಮಾರ್, ಅಸುರ ಚಿಂತನೆ ಸಾಕು, ಈಗ ರಾಮನ ಚಿಂತನೆ ಮಾಡಬೇಕಿದೆ. ಈ ಹಿನ್ನೆಲೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ನಾವು ಮೂರು ತಿಂಗಳು ವನವಾಸ ಅನುಭವಿಸಿದ್ರೂ ಚಿಂತೆಯಿಲ್ಲ. ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂತ ಪಕ್ಷದಿಂದ ಮಂತ್ರಿಗಳಾಗಿದ್ದವರೇ ಹೊರ ಬಂದರು. ಸಾಕಷ್ಟು ಜನ ಇವರನ್ನ ಅನರ್ಹರು ಅಂತ ಹೇಳ್ತಾರೆ. ಆದ್ರೆ ಇವರು ಅರ್ಹ ರಾಜಕಾರಣಿಗಳು. ನಾನು ಸಾಕಷ್ಟು ಜನರನ್ನ ಹತ್ತಿರದಿಂದ ನೋಡಿದ್ದೇನೆ. ಯಡಿಯೂರಪ್ಪ ಅವರಿಗೆ ಸುಲಭವಾಗಿ ಅಧಿಕಾರ ಸಿಗಲಿಲ್ಲ ಎಂದರು.
ಯಾರು ಭಿಕ್ಷೆ ಬೇಡಿ ಸಿಎಂ ಆಗಲಿಲ್ಲ. ರಾಜ್ಯದಲ್ಲಿ, ಬಿಬಿಎಂಪಿಗೆ ಅತಿ ಹೆಚ್ಚು ಅನುದಾನ ನೀಡಿದವರು ಯಡಿಯೂರಪ್ಪ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಕ್ಕೆ ಮುನ್ನೂರು ಕೋಟಿ ಅನುದಾನ ನೀಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಅಭಿವೃದ್ಧಿ ಆಗಲು ಯಡಿಯೂರಪ್ಪ, ಗೋಪಾಲಯ್ಯ ಕಾರಣ. ಕೇವಲ ಕ್ಷೇತ್ರ ಅಲ್ಲ, ರಾಜ್ಯವೇ ಅಭಿವೃದ್ಧಿ ಹೊಂದಬೇಕು ಎಂಬುವುದು ನಮ್ಮ ಗುರಿ ಎಂದು ಸಭೆ ಉದ್ದೇಶಿಸಿ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್‌ಸಿಪಿ ಮೈತ್ರಿ ಅಧಿಕಾರ ವಿಚಾರವಾಗಿ ಸಭೆ ನಂತರ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ ಹಿತದೃಷ್ಟಿಯಿಂದ ಕೆಲ ಯೋಚನೆಗಳನ್ನ ರಾಜಕೀಯವಾಗಿ ತೆಗೆದುಕೊಳ್ಳಬೇಕಿದೆ ಎಂದರು.