ಬೆಂಗಳೂರು: ಸುಳ್ಳು ಆಪಾದನೆ ಮಾಡುವ ಮೂಲಕ ಸಮಾಜದಲ್ಲಿ ನನಗೆ ವೈಯಕ್ತಿಕ ಮಾನ ನಷ್ಟವನ್ನು ಉಂಟುಮಾಡಲು ಪ್ರಯತ್ನಿಸಿರುವ ಕೆಪಿಸಿಸಿ ವಕ್ತಾರರಾದ ಎಂ. ಲಕ್ಷ್ಮಣ್ ಮತ್ತು ರಮೇಶ್ ಬಾಬು ವಿರುದ್ಧ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನು ಹೂಡುವುದಾಗಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರಿಂದು ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿರುವ ಎನ್.ಆರ್.ರಮೇಶ್ ಕಾಂಗ್ರೆಸ್ ಮಾಡಿರುವ ಆಪಾದನೆಗಳಿಗೆ ಸ್ಪಷ್ಟೀಕರಣ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರಾದ ಎಂ. ಲಕ್ಷ್ಮಣ್ ಮತ್ತು ರಮೇಶ್ ಬಾಬು ಮಾರ್ಚ್ 31 ರಂದು ಪತ್ರಿಕಾಗೋಷ್ಠಿಯನ್ನು ನಡೆಸಿ, ನನ್ನ ಬಗ್ಗೆ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುತ್ತಾರೆ. ಯಡಿಯೂರು ವಾರ್ಡಿನ ಪಾಲಿಕೆ ಸದಸ್ಯನಾಗಿ ನಾನು ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಮತ್ತು ನನ್ನ ಶ್ರೀಮತಿಯವರು ಕಾರ್ಯ ನಿರ್ವಹಿಸಿದ್ದ ಅವಧಿಯಲ್ಲಿ ಯಡಿಯೂರು ವಾರ್ಡಿಗೆ 250 ಕೋಟಿ ರೂಪಾಯಿಗಳಷ್ಟು ಅನುದಾನ ಮಂಜೂರಾಗಿರುವುದಾಗಿ ಸತ್ಯಕ್ಕೆ ದೂರವಾದ ಸುಳ್ಳು ಮಾಹಿತಿ ನೀಡಿದ್ದಾರೆ.
ಆದರೆ, ವಾಸ್ತವವಾಗಿ 2010-11 ರಿಂದ 2022-23 ರವರೆಗಿನ 14 ವರ್ಷಗಳ ಅವಧಿಯಲ್ಲಿ ಯಡಿಯೂರು ವಾರ್ಡಿಗೆ ಬಿಡುಗಡೆಯಾಗಿರುವ ಎಲ್ಲಾ ವಿಧದ ಅನುದಾನಗಳ ಒಟ್ಟು ಮೊತ್ತ 87 ಕೋಟಿ 42 ಲಕ್ಷ ರೂಪಾಯಿಗಳು ಮಾತ್ರ. ಕಳೆದ 14 ವರ್ಷಗಳ ಅವಧಿಯಲ್ಲಿ ಯಡಿಯೂರು ವಾರ್ಡ್ ನ 18 ಬಡಾವಣೆಗಳ ವ್ಯಾಪ್ತಿಯ ರಸ್ತೆಗಳಲ್ಲಿ ಕೇವಲ 03 ಬಾರಿ ಮಾತ್ರವೇ ಡಾಂಬರೀಕರಣ ಮಾಡಲಾಗಿದೆ ಎಂಬ ಸತ್ಯ ಅವರಿಗೆ ಅರಿವಿದ್ದಂತಿಲ್ಲ ಎಂದು ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಬೇರೆ ಭಾಗಗಳಲ್ಲಿ ಮಾಡುವಂತೆ ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಡಾಂಬರೀಕರಣ ಮಾಡುವ ಪದ್ಧತಿ ಯಡಿಯೂರು ವಾರ್ಡ್‌ಗಳಲ್ಲಿಲ್ಲ. ಅತ್ಯಂತ ವೈಜ್ಞಾನಿಕವಾಗಿ ಮತ್ತು ಸಾರ್ವಜನಿಕರಿಗೆ 06 ತಿಂಗಳ ಮುಂಚಿತವಾಗಿಯೇ ಆಯಾ ರಸ್ತೆಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡುವುದರಿಂದ ಯಡಿಯೂರು ವಾರ್ಡ್ ನಲ್ಲಿ ರಸ್ತೆ ಅಗೆತದ ಕಾರ್ಯಗಳು ಕೇವಲ 0.1% ರಷ್ಟು ಮಾತ್ರ ಇರುತ್ತದೆ. ಹಾಗಾಗಿ ಅತ್ಯಂತ ಸುಸಜ್ಜಿತವಾದ ಮತ್ತು ಸಧೃಢವಾದ ರಸ್ತೆಗಳನ್ನು ಖುದ್ದಾಗಿ ನಿಂತು ಅನುಷ್ಠಾನಗೊಳಿಸುವುದರಿಂದ ಪ್ರತಿ ಮೂರರಿಂದ ನಾಲ್ಕು ವರ್ಷಗಳಿಗೆ ಒಮ್ಮೆ ಮಾತ್ರವೇ ಡಾಂಬರೀಕರಣ ಅಥವಾ ಕಾಂಕ್ರಿಟ್ ಕಾಮಗಾರಿಗಳನ್ನು ಈ ವಾರ್ಡ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುತ್ತದೆ.
ಯಡಿಯೂರು ವಾರ್ಡ್ ನಲ್ಲಿ ಅನುಷ್ಠಾನಗೊಂಡಿರುವುದು ಕೇವಲ ಐದಾರು ದಶಕಗಳ ಕಾಲ ಶಾಶ್ವತವಾಗಿ ಸಾರ್ವಜನಿಕರ ಸೇವೆಗೆ ನಿಲುಕುವಂತಹ ಯೋಜನೆಗಳು ಮಾತ್ರವೇ ಎಂಬ ದಾಖಲೆಗಳು ಎಂ. ಲಕ್ಷ್ಮಣ್ ಮತ್ತು ರಮೇಶ್ ಬಾಬು ಅವರಿಗೆ ಸಿಕ್ಕಂತಿಲ್ಲ. ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ 15 ಉದ್ಯಾನವನಗಳು ಮತ್ತು 11 ವಿವಿಧ ಯೊಜನೆಗಳ ಕಟ್ಟಡಗಳು ಮತ್ತು ಬಹು ಉದ್ದೇಶಗಳ ಕಟ್ಟಡಗಳನ್ನು ನಿರ್ಮಿಸಲಾಗಿರುತ್ತದೆ ಎಂದು ವಿವರಣೆ ನೀಡಿದ್ದಾರೆ.
ಯಡಿಯೂರು ಕೆರೆ ಅಭಿವೃದ್ಧಿಗೆ 16 ಕೋಟಿ ರೂಪಾಯಿಗಳಷ್ಟು ಹಣ ಬಿಡುಗಡೆಯಾಗಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡಿರುತ್ತಾರೆ. ಆದರೆ, ಯಡಿಯೂರು ಕೆರೆ ಅಭಿವೃದ್ಧಿಗೆ ಕಳೆದ 14 ವರ್ಷಗಳ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ನಿರ್ಮಾಣವೂ ಸೇರಿದಂತೆ ಬಿಡುಗಡೆಯಾಗಿರುವುದು ಕೇವಲ 04 ಕೋಟಿ 15 ಲಕ್ಷ ರೂಪಾಯಿಗಳು ಮಾತ್ರ. ಅಲ್ಲದೇ, ಯಡಿಯೂರು ವಾರ್ಡ್ ವ್ಯಾಪ್ತಿಯ ಕಾಮಗಾರಿಗಳನ್ನು ಕೇವಲ ಮೂರು ಮಂದಿ ಗುತ್ತಿಗೆದಾರರು ಮಾತ್ರವೇ ನಿರ್ವಹಿಸುತ್ತಾರೆ ಎಂಬ ಸುಳ್ಳಿನ ಕಂತೆಯನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಆದರೆ ಯಡಿಯೂರು ವಾರ್ಡ್‌ನ ವ್ಯಾಪ್ತಿಯಲ್ಲಿ ಕಳೆದ 14 ವರ್ಷಗಳ ಅವಧಿಯಲ್ಲಿ ಕಾಮಗಾರಿಗಳ ನಿರ್ವಹಣೆ ಮಾಡಿರುವ ಗುತ್ತಿಗೆದಾರರ ಒಟ್ಟು ಸಂಖ್ಯೆ 143. ಹೀಗಿದ್ದರೂ ಸಹ, ಕಳೆದ 14 ವರ್ಷಗಳಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದಿರುವ 122 ಕ್ಕೂ ಹೆಚ್ಚು ಬೃಹತ್ ಹಗರಣಗಳನ್ನು ದಾಖಲೆಗಳಸಹಿತ ಬಹಿರಂಗಪಡಿಸಲಾಗಿದೆ.
ಬಯಲು ಮಾಡಿರುವ ಇಂತಹ ಹಗರಣಗಳ ಪೈಕಿ 28 ಪ್ರಕರಣಗಳನ್ನು ಕಾನೂನು ಹೋರಾಟದಲ್ಲಿ ಗೆಲ್ಲುವ ಮೂಲಕ ಸುಮಾರು 8,600 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಸರ್ಕಾರಿ ಆಸ್ತಿ ಪಾಲಿಕೆಗೆ ಮತ್ತು ಸರ್ಕಾರದ ವಶಕ್ಕೆ ವಾಪಸ್ ಬರುವಂತೆ ಮಾಡಲಾಗಿದೆ. ಇದರಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗರು ನನ್ನ ವಿರುದ್ಧವೇ ಆರೊಪ ಮಾಡುತ್ತಿದ್ದಾರೆ. ಮಾಡಿದ ಆರೋಪಗಳಿಗೆ ದಾಖಲೆಗಳನ್ನು ನೀಡಲಾಗದೇ ಅಸತ್ಯವಾದ ವಿಷಯಗಳನ್ನು ಮಾಧ್ಯಮಗಳ ಮುಂದೆ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನನ್ನ ವಿರುದ್ಧ ಸುಳ್ಳು ಆಪಾದನೆಯನ್ನು ಮಾಡುವ ಮೂಲಕ ಸಮಾಜದಲ್ಲಿ ನನಗೆ ವೈಯಕ್ತಿಕ ಮಾನ ನಷ್ಟವನ್ನು ಉಂಟು ಮಾಡಲು ಪ್ರಯತ್ನಿಸಿರುವ ಎಂ. ಲಕ್ಷ್ಮಣ್ ಮತ್ತು ರಮೇಶ್ ಬಾಬು ವಿರುದ್ಧ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನ ನಷ್ಟ ಮೊಕದ್ದಮೆಗಳನ್ನು ನನ್ನ ವಕೀಲರ ಮೂಲಕ ಇನ್ನು ನಾಲ್ಕು ದಿನಗಳೊಳಗಾಗಿ ಹೂಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರಿಮಿನಲ್ ಕೇಸಲ್ಲಿ ಜೈಲು ಶಿಕ್ಷೆ: ನಾಳೆ ಸೂರತ್ ಕೋರ್ಟ್ಗೆ ರಾಹುಲ್ ಗಾಂಧಿ ಮೇಲ್ಮನವಿ ಸಾಧ್ಯತೆ