ಬೆಂಗಳೂರು: ಮೈಸೂರು ರೇಸ್ ಕ್ಲಬ್‌ಗೆ ಸರ್ಕಾರದ 139 ಎಕರೆ 39 ಗುಂಟೆ ಜಮೀನನ್ನು 30 ವರ್ಷಗಳ ಸುಧೀರ್ಘ ಅವಧಿಗೆ ಗುತ್ತಿಗೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಗುತ್ತಿಗೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದ ವಿವರಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಸರ್ಕಾರದ ಗುತ್ತಿಗೆ ಆದೇಶ ರದ್ದು ಕೋರಿ ನಗರದ ವಕೀಲ ಎಸ್. ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಗುತ್ತಿಗೆಗೆ ಸಂಬಂಧಿಸಿದ ವಿವರಗಳನ್ನು ಪೀಠಕ್ಕೆ ಸಲ್ಲಿಸಿದರು.
ವಿವರಗಳನ್ನು ಪರಿಶೀಲಿಸಿದ ಪೀಠ, ಗುತ್ತಿಗೆ ನೀಡುವುದು ಮತ್ತು ಷರತ್ತುಗಳನ್ನು ವಿಧಿಸುವುದು ಸರ್ಕಾರದ ‘ವಿಶೇಷಾಧಿಕಾರ’ ಎಂಬ ಹೇಳಿಕೆಗೆ ಆಕ್ಷೇಪಿಸಿತು.
ರೇಸ್ ಕ್ಲಬ್‌ನ ವಾರ್ಷಿಕ ಆದಾಯದ ಶೇ.2ರಷ್ಟನ್ನು ಬಾಡಿಗೆಯಾಗಿ ನಿಗದಿಪಡಿಸಿರುವ ಸರ್ಕಾರದ ಕ್ರಮ ಎಷ್ಟರಮಟ್ಟಿಗೆ ಸರಿ. ಕ್ಲಬ್‌ಗೆ ಆದಾಯ ಬಂದಿಲ್ಲ ಎಂದಾದರೆ ಬಾಡಿಗೆ ಕಟ್ಟುವಂತಿಲ್ಲವೇ? ಬಾಡಿಗೆ ತಪ್ಪಿಸಿಕೊಳ್ಳಲು ಆದಾಯದ ಕೊರತೆ ತೋರಿಸಿದರೆ ಸರ್ಕಾರ ಏನು ಮಾಡುತ್ತದೆ ಎಂದು ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಅಲ್ಲದೇ, ರೇಸ್ ಕ್ಲಬ್‌ಗೆ ಗುತ್ತಿಗೆ ನೀಡಿರುವ ಜಮೀನಿನ ಬಾಡಿಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗಬೇಕಿತ್ತು. ಆದರೆ, ಬಾಡಿಗೆಯನ್ನೇ ಅವೈಜ್ಞಾನಿಕವಾಗಿ ನಿಗದಿ ಮಾಡಲಾಗಿದೆ. ಯಾವ ಆಧಾರದಲ್ಲಿ ಬಾಡಿಗೆಯನ್ನು ಈ ರೀತಿ ನಿರ್ಧರಿಸಲಾಗಿದೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು. ಗುತ್ತಿಗೆ ನೀಡುವ ಸಂಬಂಧ ಸಚಿವ ಸಂಪುಟ ಕೈಗೊಂಡ ನಿರ್ಣಯ ಹಾಗೂ ಪೂರಕ ದಾಖಲೆಗಳನ್ನು ಮಾ.26ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿತು.
ಇದನ್ನೂ ಓದಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನ ಖಾಸಗಿ ಕುಳಗಳಿಗೆ ಹಸ್ತಾಂತರ ಹುನ್ನಾರದ ವಿರುದ್ಧ ಹೋರಾಟ ಅಗತ್ಯ.. ಎಸ್.ಕೆ ಶ್ರೀನಿವಾಸ್
ಇದಕ್ಕೂ ಮುನ್ನ, ಮೈಸೂರು ಪ್ರವಾಸಿ ತಾಣ ಎಂದು ಸರ್ಕಾರ ಹೇಳಿದೆ. ಈಗ ರೆಸ್ ಕ್ಲಬ್‌ಗೆ ಕೊಟ್ಟಿರುವ ಜಾಗ, ಮೃಗಾಲಯಕ್ಕೆ ಕೊಡಲು ತೀರ್ಮಾನಿಸಲಾಗಿತ್ತು ಎಂದು ಸರ್ಕಾರ ತಿಳಿಸಿದೆ. ಹಾಗಿದ್ದರೆ, ಪ್ರವಾಸೋದ್ಯಮ ಬೆಳೆಯಲು ರೇಸ್ ಕ್ಲಬ್ ಮುಖ್ಯವೋ, ಮೃಗಾಲಯ ಮುಖ್ಯವೋ ಎಂಬುದನ್ನು ಸರ್ಕಾರ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ತಿಳಿಸಿತು.