ಬೆಂಗಳೂರು: ತಮ್ಮನಿಗೆ ಏನಾದರೂ ಮಾಡಬಹುದು ಎಂದು ಅಣ್ಣ ಆತಂಕದಲ್ಲಿ ಗಲಾಟೆ ಬೀಡಿಸಲು ಹೋಗಿ ಕಳೆದ ವಾರ ಕೊಲೆಯಾಗಿದ್ದ. ಆದರೆ, ಸದ್ಯ ಮೈಕೋ ಲೇಔಟ್ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂತೋಷ್, ಅಲೆಕ್ಸಾಂಡರ್, ವಿಜಯ್, ದಿಲೀಪ್ ಹಾಗೂ ವಿಶಾಲ್ ಬಂಧಿತರು. ಕಳೆದ ಸೋಮವಾರ ರಾತ್ರಿ ಮೈಕೋ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಎಸ್ ಪಾಳ್ಯದ ಬಳಿ ಮಣಿ ಎಂಬಾತನನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಹೀಗಾಗಿ ಪೊಲೀಸರು ತಂಡ ರಚನೆ ಮಾಡಿ ತನಿಖೆಗೆ ಇಳಿದಾಗ ಅಸಲಿ ವಿಚಾರ ಬಯಲಾಗಿದೆ.
ಮಣಿಯ ತಮ್ಮ ಲೋಕೇಶ್ ಹಾಗೂ ಆರೋಪಿಗಳು ಭಾನುವಾರ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದರು. ಈ ವೇಳೆ, ತಮ್ಮನಿಗೆ ಏನಾದರೂ ಆರೋಪಿಗಳು ಮಾಡಿದರೆ ಎಂದು ಗಲಾಟೆಯಲ್ಲಿ ಮಧ್ಯಪ್ರವೇಶ ಮಾಡಿ ತಮ್ಮನ ಪರವಾಗಿ ಜಗಳ ಮಾಡಿಕೊಂಡಿದ್ದ. ಇದೇ ಕಾರಣದಿಂದ ತಮ್ಮನ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಸದ್ಯ ಮೈಕೋ ಲೇಔಟ್ ಪೊಲೀಸರು ಆರೋಪಿಗಳನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.