ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಉಷಾರಾಣಿ ಎಂಬುವವರು ರಾಜ್ಯ ಸರ್ಕಾರ ಕೊಡ ಮಾಡುವ ಪ್ರತಿಷ್ಠಿತ ಕನ್ನಡ ರಾಜೋತ್ಸವ ಪ್ರಶಸ್ತಿ ಭಾಜನರಾಗಿದ್ದಾರೆ.
ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಉಷಾರಾಣಿ ಕಬಡ್ಡಿಯಲ್ಲಿ ತೋರಿದ ಅಮೋಘ ಸಾಧನೆ ಗುರುತಿಸಿ ಸರ್ಕಾರ ರಾಜೋತ್ಸವ ಪ್ರಶಸ್ತಿ ಘೋಷಿಸಿದೆ. ಕ್ರೀಡಾ ಕೋಟಾದಡಿ 2007 ರಲ್ಲಿ ಇಲಾಖೆಗೆ ಸೇರಿದ್ದ ಉಷಾ ಇದುವರೆಗೂ ಎರಡು ಬಾರಿ ದೇಶದ ಪರವಾಗಿ ಪ್ರತಿನಿಧಿಸಿದ್ದಾರೆ. 2018ರಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ದಕ್ಷಿಣ ಭಾರತದ ಏಕೈಕ ಮಹಿಳೆಯಾಗಿದ್ದು, ಭಾರತ ತಂಡದಲ್ಲಿ ಆಡಿದ್ದರು. 18 ಬಾರಿ ರಾಜ್ಯ ಪರವಾಗಿ ಆಡಿ ವಿವಿಧ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಮೂಲತಃ ಬೆಂಗಳೂರಿನ ಯಶವಂತಪುರ ನಿವಾಸಿಯಾಗಿರುವ ಈಕೆ ಶಾಲಾ ದಿನಗಳಿಂದಲೂ ಕಬಡ್ಡಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ತಮ್ಮ ಪ್ರತಿಭೆಗೆ ಸಾಣೆ ಹಿಡಿದಿದ್ದು ಕೋಚ್ ಜಗದೀಶ್. ಪ್ರತಿಭೆಯನ್ನು ಗುರುತಿಸಿ ಮಾತಾಸ್ ಸ್ಪೋರ್ಟ್ಸ್ ಕ್ಲಬ್ ಸೇರಿಕೊಂಡರು. ದ್ವೀತಿಯ ಪಿಯುಸಿ ಬಳಿಕ ಕ್ರೀಡಾ ಕೋಟದಡಿ ಪೊಲೀಸ್ ಇಲಾಖೆಗೆ ಸೇರಿಕೊಂಡು, ರಾಜ್ಯ, ರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಉಷಾರಾಣಿ, ರಾಜೋತ್ಸವ ಪ್ರಶಸ್ತಿ ಬಂದಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ. ಈ ಪ್ರಶಸ್ತಿ ನನಗೆ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ಕುಟುಂಬ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ನಾನು ತುಂಬಾ ಕೆಳಮಟ್ಟದಿಂದ ಬಂದಿದ್ದೇನೆ. ನಮ್ಮ ಮನೆ ಮುಂದೆ ಬಳಿಯಿದ್ದ ಮಾತಾಸ್ ಸ್ಟೋರ್ಟ್ಸ್ ಕ್ಲಬ್ ಸೇರಿಕೊಂಡಿದ್ದೆ. ಬಡತನದಿಂದ ಬಂದಿದ್ದ ನನಗೆ ಹಣವಿರಲಿಲ್ಲ. ಹೀಗಾಗಿ ಕಬ್ಬಡಿಯತ್ತ ಮುಖ ಮಾಡಿದೆ ಎಂದರು.
ಸದ್ಯ ಕಬಡ್ಡಿಯನ್ನು ಒಲಿಂಪಿಕ್ ಸೇರಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಕಬಡ್ಡಿಯನ್ನು ಒಲಿಂಪಿಕ್ ಸೇರಿಸಿದರೆ ಅಲ್ಲಿ ಹೋಗಿ ಆಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆಯುವುದೇ ನನ್ನ ಪ್ರಮುಖ ಗುರಿಯಾಗಿದೆ ಎಂದು ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.