ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆ ನಾಳೆ ಯಾರೂ ಕೂಡಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದಿರಲು ಮುಸ್ಲಿಂ ಧಾರ್ಮಿಕ ಮುಖಂಡರು ಒಪ್ಪಿಕೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ನಾಳೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಬೆಂಗಳೂರಿನಲ್ಲಿರುವ ಎಲ್ಲಾ ಮಸೀದಿಗಳ ಮುಖಂಡರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಎಲ್ಲರೂ ಮನೆಯಲ್ಲಿಯೇ ಪ್ರಾರ್ಥನೆ ಮಾಡಿಕೊಳ್ತೇವೆ ಅಂತ ತಿಳಿಸಿದ್ದಾರೆ. ಈಗಾಗಲೇ ವಾಟ್ಸಪ್ ಮುಖಾಂತರ ಮೆಸೇಜ್ ಕಳಿಸಿ ಮನೆಯಲ್ಲಿಯೇ ಪ್ರಾರ್ಥನೆ ಮಾಡುವುದಕ್ಕೆ ಮನವಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ದೇಶ ಉಳೀಬೇಕು, ಬೆಂಗಳೂರು ಉಳಿಯಬೇಕು ಅಂದ್ರೆ ಸರ್ಕಾರ ಏನೇನು ಕ್ರಮ ಕೈಗೊಳ್ಳುತ್ತೋ ಅದರ ಜೊತೆ ನಾವು ಇರುತ್ತೇವೆ. ನಮ್ಮೆಲ್ಲಾ ಸಹಕಾರವನ್ನ ಸರ್ಕಾರಕ್ಕೆ ಕೊಡುತ್ತೇವೆ. ಕೊರೊನಾವನ್ನ ಹೋಗಲಾಡಿಸಲು ಸೈನಿಕರಂತೆ ಹೋರಾಟ ನಡೆಸುತ್ತೇವೆ ಎಂದಿದ್ದಾರೆ. ಆದ್ದರಿಂದ ನಾವು ಎಲ್ಲಾ ಮುಖಂಡರನ್ನು ಸರ್ಕಾರದಿಂದ ಗೌರವಿಸುತ್ತೇವೆ. ಸರ್ಕಾರವೂ ಕೂಡಾ ಎಲ್ಲಾ ಧರ್ಮದವರ ಪರವಾಗಿರುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.