ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳ ಮುಂದೆ ವಸತಿ ಹಾಗೂ ವಕ್ಫ್ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಹಾಜರಾದರು.
ಅಸಮತೋಲಿತ ಆಸ್ತಿ ಗಳಿಕೆ ಆರೋಪದಡಿ 2022ರಲ್ಲಿ ಜುಲೈ 5ರಂದು ಎಸಿಬಿ (Karnataka Anti Corruption Bureau - ಕರ್ನಾಟಕ ಭ್ರಷ್ಟಾಚಾರ ನಿಗ್ರಹ ದಳ) ಜಮೀರ್ ಅಹ್ಮದ್ ಅವರ ಮನೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.
ಅದಕ್ಕೂ ಮುನ್ನ 2021ರಲ್ಲಿ ಜಾರಿ ನಿರ್ದೇಶಾಲಯ (ಇ.ಡಿ) ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಆದಾಯಕ್ಕಿಂತ 2030ರಷ್ಟು ಹೆಚ್ಚು ಆಸ್ತಿ ಸಂಪಾದನೆ ಮಾಡಿರುವುದನ್ನ ಪತ್ತೆ ಹಚ್ಚಿದ್ದರು. ಈ ಬಗ್ಗೆ ಇ.ಡಿ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಅಂದಿನ ಎಸಿಬಿಗೆ ಪತ್ರ ಬರೆದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಬೇಕೆಂದು ಇ.ಡಿ ಸೂಚಿಸಿತ್ತು. ಇದರಂತೆ 2022ರಲ್ಲಿ ಜಮೀರ್ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು.
ಎಸಿಬಿ ರದ್ದು ಬಳಿಕ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಇತ್ತೀಚೆಗೆ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಇಂದು ಜಮೀರ್ ಅವರು ಲೋಕಾಯುಕ್ತ ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸಿದರು.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಮೂರು ನೋಟಿಸ್ ಕೊಟ್ಟಿದ್ದರೂ ಬರೋದಕ್ಕೆ ಆಗಿರ್ಲಿಲ್ಲ. ಇಂದು ಮಧ್ಯಾಹ್ನ 3.30ಕ್ಕೆ ಬರೋದಕ್ಕೆ ಅಧಿಕಾರಿಗಳು ತಿಳಿಸಿದ್ದರು. ನಾನು 3 ಗಂಟೆಗೆ ವಿಚಾರಣೆಗೆ ಹಾಜರಾದೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಮತ್ತೆ ಅವಶ್ಯಕತೆ ಇದ್ದರೆ ಕರೆಯುತ್ತೇವೆ ಎಂದಿದ್ದಾರೆ. ಅವರು ಕರೆದರೆ ವಿಚಾರಣೆಗೆ ಬರುತ್ತೇನೆ ಎಂದರು.
ಇದನ್ನೂ ಓದಿ: ಕುದುರೆ ಏರಿ ಬಂದ ಸಚಿವ ಜಮೀರ್ ಅಹಮ್ಮದ್ ಖಾನ್; ಭರ್ಜರಿ ಸ್ವಾಗತ ಕೋರಿದ ಬೆಂಬಲಿಗರು