ಬೆಂಗಳೂರು: ಮುರುಘಾ ಮಠದ ಆಡಳಿತಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ರಾಜ್ಯ ಸರಕಾರದ ಕಂದಾಯ ಇಲಾಖೆಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದಾರೆ.
ಶಿವಮೂರ್ತಿ ಮುರುಘರು ಜೈಲು ಸೇರಿದ ಮೇಲೆ ಮಠದ ಆಡಳಿತ ಸರಿಯಾಗಿ ನಡೆಯುತ್ತಿಲ್ಲ. ಮಠಕ್ಕೆ ಸೇರಿದ ಹಲವು ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಸಮರ್ಪಕವಾಗಿ ನಡೆಸಲು ಸರಕಾರದಿಂದ ಆಡಳಿತಾಧಿಕಾರಿ ನೇಮಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಡಾ.ಮಧು ಅರ್ಜಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮಠದ ಆಡಳಿತ ಮತ್ತು ಕಾರ್ಯನಿರ್ವಹಣೆ ಬಗ್ಗೆ ವರದಿ ಸಲ್ಲಿಸಲು ಆದೇಶಿಸಿದ್ದರು.
ಜಿಲ್ಲಾಧಿಕಾರಿಗಳು ಮುರುಘಾ ಮಠ ಮತ್ತು ಅದರ ಆಡಳಿತ ವ್ಯಾಪ್ತಿಗೆ ಒಳಪಡುವ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಇದೀಗ ಹತ್ತಾರು ದಾಖಲೆಗಳೊಂದಿಗೆ ಕಂದಾಯ ಇಲಾಖೆಗೆ ಮುಚ್ಚಿದ ಲಕೋಟೆಯಲ್ಲಿ 5 ಪುಟಗಳ ವರದಿ ಒಪ್ಪಿಸಿದ್ದಾರೆ. ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಮಠಕ್ಕೆ ಆಡಳಿತಾಧಿಕಾರಿ ನೇಮಕದ ಬಗ್ಗೆ ತೆಗೆದುಕೊಳ್ಳುವ ತೀರ್ಮಾನ ಸಾರ್ವಜನಿಕರು ಮತ್ತು ಮಠದ ಭಕ್ತ ಸಮೂಹದಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಮುರುಘಾ ಮಠ ಪ್ರಕರಣ: ಕ್ರಮ ಕೈಗೊಂಡ ವರದಿ ನೀಡುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನಿರ್ದೇಶನ