ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನಿವಾಸಕ್ಕಿಂದು ಕಾಂಗ್ರೆಸ್ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ದಿಢೀರ್ ಭೇಟಿ ನೀಡಿದ್ದು, ಕುತೂಹಲ ಮೂಡಿಸಿದೆ.
ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಮುನಿಯಪ್ಪ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ರು. ಆದ್ರೆ ಯಾವ ಕಾರಣಕ್ಕೆ ದೊಡ್ಡಗೌಡರನ್ನು ಮುನಿಯಪ್ಪ ಭೇಟಿ ಮಾಡಿದರೆಂಬುದು ಮಾತ್ರ ತಿಳಿದು ಬಂದಿಲ್ಲ.
ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಹೆಚ್. ಮುನಿಯಪ್ಪ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟರೆ ನಾನು ನಿಭಾಯಿಸುತ್ತೇನೆ. ನನಗೆ ಸಾಕಷ್ಟು ಅನುಭವ ಇದೆ. ನನ್ನ ಬಗ್ಗೆ ಹೈಕಮಾಂಡ್ಗೆ ಗೊತ್ತಿದೆ. ಹೈಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದರು.
ಇನ್ನು, ಉಪ ಚುನಾವಣೆಯಲ್ಲಿ ಹೆಚ್ಚು ಹಣ ಖರ್ಚು ಮಾಡಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಆರೋಪಿಸಿದ ಅವರು. ಜನಾದೇಶಕ್ಕೆ ನಾವು ಬದ್ಧವಾಗಿರಬೇಕು. ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷದ ಗೌರವ ಮತ್ತು ವೈಯಕ್ತಿಕ ಗೌರವ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಿದ್ರು.