ಬೆಂಗಳೂರು: ಆರ್ಆರ್ ನಗರ ಉಪಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿರುವ ಮುನಿರತ್ನ ಇಂದು ಸಂಜೆ ತಮ್ಮ ಮಲ್ಲೇಶ್ವರಂ ನಿವಾಸದಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು.
ಈ ವೇಳೆ ಮಾತನಾಡಿದ ಗೆದ್ದ ಬಿಜೆಪಿ ಅಭ್ಯರ್ಥಿ ಮುನಿರತ್ನ, ನಾನು ಚುನಾವಣೆ ಮಾಡಿದೆ ಎನ್ನಲ್ಲ. ನಾವು ಅಂದರೆ ಎಲ್ಲರ ನಾಯಕತ್ವದಲ್ಲಿ ಈ ಚುನಾವಣೆ ಜಯ ಆಗಿದೆ. ಹೆಚ್ಎಂಟಿ ವಾರ್ಡ್ನಲ್ಲಿ ಹೊರಗಿನಿಂದ ಬಂದು ಪ್ರಚಾರ ಮಾಡ್ತಾ ಇದ್ರು. ಮಾಧ್ಯಮಗಳನ್ನು ಕಂಡು ಅವರು ಕಾಲ್ಕಿತ್ತರು. ಮಾಧ್ಯಮದವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳುತ್ತೇನೆ ಎಂದರು.
ಚುನಾವಣೆಯಲ್ಲಿ ನಾನು ಇಷ್ಟು ಲೀಡ್ ನಿರೀಕ್ಷೆ ಮಾಡಿರಲಿಲ್ಲ, ಮತ ಹೆಚ್ಚುವರಿಯಾಗಿ ಬಂದಿರೋದು ಸಂತೋಷವಾಗಿದೆ. ಮತಗಳ ಮುಖಾಂತರ ಮತದಾರರು ನಮ್ಮ ಜೊತೆ ಇದ್ದಾರೆ ಎಂದು ಸಾಬೀತಾಗಿದೆ ಎಂದರು.
ಪ್ರತಿ ವಾರ್ಡ್ ಸಭೆಗಳನ್ನು ಕರೆಯುತ್ತೇನೆ. ದಿನದ 24 ಗಂಟೆ ಸಾರ್ವಜನಿಕರ ಕುಂದು ಕೊರತೆಗಳನ್ನು ಕೇಳುತ್ತೇನೆ ಜನ ತೀರ್ಪು ಕೊಟ್ಟಾಗಿದೆ. ಪ್ರತಿಪಕ್ಷದವರು ಮಾಡಿದ ಆರೋಪಗಳ ಬಗ್ಗೆ ಮಾತಾಡೋದು ಈಗ ಬೇಡ ಎಂದು ಡಿಕೆಶಿ ಹಾಗೂ ಡಿ.ಕೆ ಸುರೇಶ್ ಬಗ್ಗೆ ತಿರುಗೇಟು ನೀಡಲು ನಿರಾಕರಿಸಿದರು.
ಮತದಾರರ ಪ್ರಬುದ್ದತೆ ಕಡಿಮೆ ಆಗಿದೆ ಎಂದು ಡಿ.ಕೆ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅದನ್ನು ಮುಂದಿನ ದಿನಗಳಲ್ಲಿ ಮತದಾರರೇ ಉತ್ತರ ಕೊಡ್ತಾರೆ ಅದು ಸಾರ್ವಜನಿಕರಿಗೆ ಸಂಬಂಧ ಪಟ್ಟ ವಿಚಾರ ಎಂದರು.
ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ. ಮಂತ್ರಿ ಪದವಿ, ಖಾತೆ ಎಲ್ಲವನ್ನೂ ನಮ್ಮ ಮುಖ್ಯಮಂತ್ರಿಗಳು, ಪಕ್ಷದ ವರಿಷ್ಟರು ತೀರ್ಮಾನ ಮಾಡುತ್ತಾರೆ. ನಿಖಿಲ್ ನನ್ನ ವಿರುದ್ದ ಮತಯಾಚನೆ ಮಾಡಿದ್ದಾರೆ. ಅದು ಅವರ ಪಕ್ಷ ಅವರು ಪ್ರಚಾರ ಮಾಡಿದ್ದಾರೆ. ಸ್ನೇಹ ಬೇರೆ, ರಾಜಕೀಯ ಬೇರೆ. ನಿಖಿಲ್ ಕುಮಾರಸ್ವಾಮಿ ಹಾಕಿಕೊಂಡು ನಾನು ಸಿನಿಮಾ ಮಾಡೋನಿದ್ದೇನೆ. ನಾನು ಶಾಸಕನಾಗುವ ಮೊದಲು ಸಿನಿಮಾ ನಿರ್ಮಾಪಕನಾಗಿದ್ದವನು ಎಂದರು.
ಬಡ ರೋಗಿಗಳ ಹತ್ತಿರ ಹಣ ಸುಲಿಗೆ ಮಾಡಿದರೆ ಖಂಡಿತ ನಾನು ಸಹಿಸಲ್ಲ. ಅದಕ್ಕೆ ನಾನು ಮಂತ್ರಿ ಆಗಲೇಬೇಕೆಂದಿಲ್ಲ. ಯಾವುದೇ ಆಸ್ಪತ್ರೆ ಹಣ ಸುಲಿಗೆ ಮಾಡಿದ ದೂರು ಬಂದರೆ ಖಂಡಿತ ನಾನೇ ಖುದ್ದು ಭೇಟಿ ನೀಡುತ್ತೇನೆ. ಕಷ್ಟ ಕಾಲದಲ್ಲಿ ಇರುವಾಗ ಆ ದೇವರು ಮೆಚ್ಚುತ್ತಾನೆ ಚುನಾವಣೆಗೋಸ್ಕರ ಸಹಾಯ ಮಾಡಿಸರೆ ಅದು ಸ್ವಾರ್ಥ, ಅದನ್ನು ಸೇವೆ ಎಂದು ಕರೆಯಲ್ಲ ಎಂದರು.
ಮಕ್ಕಳ ಆನ್ ಲೈನ್ ಕ್ಲಾಸ್ಗೆ ಲ್ಯಾಪ್ ಟಾಪ್ ಖರೀದಿಗೆ ತುಂಬಾ ಜನ ತಾಯಂದಿರು ಸಹಾಯ ಕೇಳಿದ್ದಾರೆ. ನನ್ನ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಲ್ಯಾಪ್ ಟಾಪ್ ನೆರವು ನೀಡುತ್ತೇನೆ. ದೀಪಾವಳಿ ಮುಂಚೆ ಅಥವಾ ಹಬ್ಬದ ಬಳಿಕ ಖಂಡಿತ ಲ್ಯಾಪ್ ಟಾಪ್ ಸಹಾಯ ಮಾಡುತ್ತೇನೆ ಎಂದರು.
ಚುನಾವಣೆಯಲ್ಲಿ ಒಂದೇ ಒಂದು ಸ್ಕೂಟರ್ ನಲ್ಲಿ ಹೋಗಿ ಪ್ರಚಾರ ಮಾಡಿ ಶಾಸಕಾರಾಗಿದ್ದರು. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ಬೇಡ. ಜೆಡಿಎಸ್ ಕ್ಯಾಂಡಿಡೇಟ್ ಡಮ್ಮಿ ಅನ್ನಬಾರದು. ಒಳ ಒಪ್ಪಂದದ ಪ್ರಶ್ನೆಯೇ ಆಗಿಲ್ಲ, ಜೆಡಿಎಸ್ ನವರೂ ನನ್ನ ವಿರುದ್ದ ಮಾತಾಡಿದ್ದಾರೆ. ಆದರೆ ಹನುಮಂತರಾಯಪ್ಪನವರು ಇರೋ ಬರೋರನ್ನೆಲ್ಲಾ ಕರಕೊಂಡು ಬಂದ ಕಾರಣ ಜೆಡಿಎಸ್ಗೆ ಹಿನ್ನಡೆ ಆಗಿರಬಹುದು ಎಂದು ಜೆಡಿಎಸ್ ಬಗೆಗಿನ ಪ್ರೆಶ್ನೆಗೆ ಉತ್ತರಿಸಿದರು.
ಮತ್ತೆ ಈಗ ಪಕ್ಷ ಬಿಟ್ಟವರು ಮತ್ತೆ ವಾಪಾಸ್ ಬರಬಹುದು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಇವರು ಹೀಗೆ ನಡೆದುಕೊಂಡರೆ ಯಾರೂ ಇರಲ್ಲ. ಇಲ್ಲಾಂದ್ರೆ ಇರೋ 65 ಜನ ಶಾಸಕರೂ ಬಿಟ್ಟು ಹೋಗ್ತಾರೆ. ಮೊದಲು ಇರೋರನ್ನ ಚೆನ್ನಾಗಿ ನೋಡಿಕೊಳ್ಳಲಿ. ಸರಿಯಾಗಿ ನಡೆದುಕೊಂಡರೆ ಯಾರೂ ಪಕ್ಷ ಬಿಡಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.