ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಇಂದು ಭೇಟಿಯಾಗಿ ತಮ್ಮ ನಿರ್ಧಾರ ತಿಳಿಸಿದ್ದ ಮುದ್ದಹನುಮೇಗೌಡ, ಸಂಜೆಯೊಳಗೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.
ಈಗಾಗಲೇ ನಾಲ್ಕು ಸಾರಿ ತಮಗೆ ಲೋಕಸಭಾ ಟಿಕೆಟ್ ತಪ್ಪಿಸಲಾಗಿದೆ. ಕಳೆದ ಸಾರಿಯೂ ತುಮಕೂರಿನಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕಣಕ್ಕಿಳಿದ ಸಂದರ್ಭ ತಮಗೆ ಬೇರೆ ರಾಜಕೀಯ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಕೊಟ್ಟ ಮಾತಿನಂತೆ ಕಾಂಗ್ರೆಸ್ ನಾಯಕರು ನಡೆದುಕೊಂಡಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸಿ ರಾಜೀನಾಮೆ ಸಲ್ಲಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಬಂಧಿಯಾಗಿರುವ ಡಾಕ್ಟರ್ ರಂಗನಾಥ್ ಹಾಲಿ ಕಾಂಗ್ರೆಸ್ ಶಾಸಕರಾಗಿದ್ದು, ಇವರ ಬದಲು ಮುಂದಿನ ಸಾರಿ ಕುಣಿಗಲ್ನಿಂದ ಮುದ್ದಹನುಮಗೌಡರಿಗೆ ಟಿಕೆಟ್ ನೀಡಲು ಒಪ್ಪಿಗೆ ಸಿಕ್ಕಿರಲಿಲ್ಲ. ಮುಂದಿನ ಚುನಾವಣೆಯಲ್ಲಿಯೂ ರಂಗನಾಥ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಕಳೆದುಕೊಂಡಿರುವ ಮುದ್ದಹನುಮೇಗೌಡರು ವಿಧಾನಸಭೆ ಮೂಲಕ ತುಮಕೂರಿನಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಮತ್ತೋರ್ವ ನಾಯಕ ರಾಜೀನಾಮೆ: ಬಯಲು ಸೀಮೆ ಜಿಲ್ಲೆಯಾಗಿರುವ ತುಮಕೂರಿನಲ್ಲಿ ಮುದ್ದಹನುಮೇಗೌಡರ ಪಾಲಿಗೆ ಬಿಜೆಪಿ ಅನಿವಾರ್ಯ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ತನ್ನ ವಿಸ್ತಾರ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿಗೂ ಇವರು ಕಲ್ಪತರುವಿನಂತೆ ಲಭಿಸಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದ ಮುದ್ದಹನುಮೇಗೌಡ ಅಂತಿಮವಾಗಿ ತಮ್ಮ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದು, ಕಳೆದ ಎರಡು ದಿನದ ಅವಧಿಯಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿದ ಕಾಂಗ್ರೆಸ್ನ ಎರಡನೇ ನಾಯಕ ಆಗಿದ್ದಾರೆ. ನಿನ್ನೆಯಷ್ಟೇ ಮಾಜಿ ಎಂಎಲ್ಸಿ ಎಂಡಿ ಲಕ್ಷ್ಮಿ ನಾರಾಯಣ ಪಕ್ಷಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದರು.
(ಇದನ್ನೂ ಓದಿ: ರಾಜ್ಯದಲ್ಲೂ ಕಾಂಗ್ರೆಸ್ ನಾಯಕರ ಸಾಲು ಸಾಲು ರಾಜೀನಾಮೆ?)