ಹೊಸಕೋಟೆ: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಒಟ್ಟು ಆಸ್ತಿ 1,195 ಕೋಟಿ ರೂ. ಆಗಿದ್ದು, ಒಂದೇ ವರ್ಷದಲ್ಲಿ 180 ಕೋಟಿ ರೂ. ಹೆಚ್ಚಳವಾಗಿದೆ.
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕಾಗಿ ಅನರ್ಹಗೊಂಡಿದ್ದ ಎಂಟಿಬಿ ನಾಗರಾಜ್ ಹೊಸಕೋಟೆ ಉಪಚುನಾವಣೆಗೆ ಶುಕ್ರವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಆಸ್ತಿ ವಿವರ ಸಲ್ಲಿಕೆಗೆ ಸಲ್ಲಿಸಿದ ದಾಖಲೆ ಪತ್ರದಲ್ಲಿ ಎಂಟಿಬಿ ನಾಗರಾಜ್, 1,195 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ 1,015 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಇದಕ್ಕೆ ಹೋಲಿಸಿದರೆ ಕೇವಲ ಒಂದು ವರ್ಷದಲ್ಲಿ ಆಸ್ತಿ ಮೊತ್ತ 180 ಕೋಟಿ ರೂ.ಗೆ ಏರಿಕೆ ಆಗಿದೆ. ಎಂಟಿಬಿ ಪತ್ನಿ ಹೆಸರಿನಲ್ಲಿ ₹27.70 ಕೋಟಿ ಆಸ್ತಿ ಇದೆ. ಉಳಿತಾಯ ಖಾತೆಯಲ್ಲಿ 166 ಕೋಟಿ ರೂ. ಮತ್ತು ಬ್ಯಾಂಕ್ಗಳಲ್ಲಿ ಠೇವಣಿ ರೂಪದಲ್ಲಿ 166 ಕೋಟಿ ರೂ. ಇದೆ.
ಕರ್ನಾಟಕದ ಶ್ರೀಮಂತ ರಾಜಕಾರಣಿ ಎನಿಸಿರುವ ಎಂಟಿಬಿ ನಾಗರಾಜ್ ಅವರ ಆಸ್ತಿ ಕಳೆದ ವಿಧಾನಸಭೆ ಚುನಾವಣೆಯಿಂದ ಈವರೆಗಿನ 18 ತಿಂಗಳಿನಲ್ಲಿ 180 ಕೋಟಿಯಷ್ಟು ಹೆಚ್ಚಾಗಿದೆ. ಅಗಸ್ಟ್ 2 ರಿಂದ 7ನೇ ದಿನಾಂಕದೊಳಗೆ ಎಂಟಿಬಿ ಅವರ ಖಾತೆಗೆ 53 ಕಂತುಗಳಲ್ಲಿ 48 ಕೋಟಿಗೂ ಹೆಚ್ಚು ಹಣ ಜಮೆಯಾಗಿದೆ. ಈ ಅವಧಿಯಲ್ಲಿ ಅವರು ಅನರ್ಹತೆಯ ಪ್ರಕರಣ ಎದುರಿಸುತ್ತಿದ್ದರು. ಆದರೂ ಅವರ ಖಾತೆಗೆ ಹಣ ಜಮಾ ಆಗಿರುವುದು ಎಲ್ಲರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.