ಬೆಂಗಳೂರು : ಬೆಂಗಳೂರು ಉಗ್ರರ ತಾಣವಾಗಿದೆ ಎಂದು ಹೇಳಿಕೆ ನೀಡಿದ್ದ ಸಂಸದ ತೇಜಸ್ವಿ ಸೂರ್ಯ ತಮ್ಮ ಹೇಳಿಕೆ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ ರಾಷ್ಟ್ರ ಯುವ ಮೋರ್ಚಾ ಅಧ್ಯಕ್ಷರ ಪದಗ್ರಹಣದ ಬಳಿಕ ಈ ವಿಚಾರ ಪ್ರತಿಕ್ರಿಯೆ ನೀಡಿದ ಅವರು, ನನ್ನ ಹೇಳಿಕೆಯ ಅರ್ಥ ಏನು ಎಂಬುದು ಓದಿದ ಪ್ರತಿಯೊಬ್ಬರಿಗೂ ಗೊತ್ತಿದೆ. ರಾಜ್ಯದಲ್ಲಿ ಈ ಹಿಂದೆ ನಡೆದ ಅಹಿತಕರ ಘಟನೆಗಳನ್ನ ಆಧರಿಸಿ, ಬೆಂಗಳೂರು ಉಗ್ರರ ತಾಣ ಆಗ್ತಿದೆ ಎನ್ನುವುದು ಅದರ ಅರ್ಥ.
ಉಗ್ರರ ಕಾರ್ಯಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎನ್‌ಐಎ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕು ಎಂಬ ಉದ್ದೇಶ ನನ್ನದು ಎಂದು ತಮ್ಮ ಹೇಳಿಕೆ ಸಮರ್ಥಿಸಿದರು.
ಬೆಂಗಳೂರು ನನಗೆ ಅಕ್ಷರ, ಅನ್ನ ಕೊಟ್ಟು ನನ್ನನ್ನು ಸಂಸದನನ್ನಾಗಿ ಮಾಡಿ ನನಗೆ ಅಸ್ಮಿತೆ ಕೊಟ್ಟಿದೆ. ಇಡೀ ದೇಶದಲ್ಲಿ ಬೆಂಗಳೂರಿನ ಹುಡುಗ ತೇಜಸ್ವಿ ಎಂದು ಪರಿಚಯ ಮಾಡಿಕೊಳ್ಳಲು ಕಾರಣ ಬೆಂಗಳೂರು. ಇಂತಹ ಬೆಂಗಳೂರಿನಲ್ಲಿ ಉಗ್ರರ ಚಟುವಟಿಕೆ ನಡೆಯುತ್ತಿದೆ ಎಂದರೆ ನನ್ನ ರಕ್ತ ಕುದಿಯುತ್ತದೆ ಎಂದರು.
ಬೆಂಗಳೂರು ಉಗ್ರರ ತಾಣವಾಗಬಾರದು ಎಂಬ ಕಾರಣಕ್ಕೆ ಹಾಗೂ ಸುರಕ್ಷತೆಗಾಗಿ ಎನ್ಐಎ ತಾಣ ಬೆಂಗಳೂರಿಗೆ ಬರಬೇಕೆಂದು ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೆ. ಆದರೆ, ಬೆಂಗಳೂರಿಗೆ ಎನ್ಐಎ ಬರೋದಿಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧಿಸುತ್ತಿದ್ದಾರೆ. ಕ್ಷಮೆ ಕೇಳಬೇಕಾದವರು ಅವರು ಎಂದು ಕಿಡಿಕಾರಿದರು.